ನ್ಯೂಸ್ ನಾಟೌಟ್ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ೧೧ ವರ್ಷಗಳ ಬಳಿಕ ರೋಚಕ ಟ್ವಿಸ್ಟ್ ಸಿಕ್ಕಿತ್ತು. ಇತ್ತೀಚೆಗಷ್ಟೇ ಸಿಬಿಐ ವಿಶೇಷ ಕೋರ್ಟ್ ಸಂತೋಷ್ ರಾವ್ ದೋಷ ಮುಕ್ತ ಎಂದು ಆದೇಶ ಹೊರಡಿಸಿತ್ತು. ಅಷ್ಟು ಸಮಯ ಹಂತಕ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದ ಸಂತೋಷ್ ರಾವ್ ಅಪರಾಧಿ ಅಲ್ಲ ಆದೇಶದ ಬೆನ್ನಲ್ಲೇ ಹಲವು ಅನುಮಾನಗಳು ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿದ್ದವು. ಹಾಗಾದರೆ ನಿಜವಾದ ಅಪರಾಧಿಗಳು ಯಾರು? ನಿಜವಾದ ಅಪರಾಧಿಗಳನ್ನು ಹುಡುಕಿ ಅವರಿಗೆ ಶಿಕ್ಷಿ ನೀಡಿ ಅನ್ನುವ ಒತ್ತಾಯಗಳು ಕೇಳಿ ಬಂದಿದ್ದವು.ಇದೀಗ ಸೌಜನ್ಯ ಹೋರಾಟಕ್ಕೆ ಒಡನಾಡಿ ಸೇವಾ ಸಂಸ್ಥೆ ಎಂಟ್ರಿ ಕೊಟ್ಟಿದೆ.
ಈ ಹಿಂದೆ ಮುರುಘಾ ಶ್ರೀ ಪ್ರಕರಣದಲ್ಲಿ ಹೋರಾಟಕ್ಕಿಳಿದಿದ್ದ ಒಡನಾಡಿ ಸಂಸ್ಥೆ ಸೌಜನ್ಯ ಪರವಾದ ನ್ಯಾಯದ ಹೋರಾಟಕ್ಕೆ ಬೆಂಬಲ ನೀಡಲು ಮುಂದಾಗಿದೆ. ಈ ಸಂಸ್ಥೆ ರಾಜ್ಯಾದ್ಯಂತ ಸೌಜನ್ಯ ಪರವಾಗಿ ಹೋರಾಟ ನಡೆಸಲಿದ್ದು, ನಿನ್ನೆ ಸೌಜನ್ಯ ಪರ ಹೋರಾಟಗಾರರನ್ನು ಒಡನಾಡಿ ಮುಖಂಡರು ಭೇಟಿಯಾಗಿದ್ದಾರೆ. ಈ ಕುರಿತು ಮಾತನಾಡಿರುವ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾಲಿನ್”ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಸೌಜನ್ಯ ಪ್ರಕರಣ ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಅತ್ಯಾಚಾರ ಮಾಡಿದ ಪಾಪಿಗಳನ್ನು ಇನ್ನೂ ನ್ಯಾಯದ ಕಟಕಟೆಗೆ ತರಲಾಗಿಲ್ಲ. ಇದು ದೇಶದ ಕಾನೂನಿಗೆ ಸಾಧ್ಯವಾಗಿಲ್ಲ ಎಂಬುವುದು ನಗೆಪಾಟಲಿನ ಸಂಗತಿಯಾಗಿದೆ. ಸಿಬಿಐ ಘನತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಮರುತನಿಖೆಯಾಗಬೇಕು, ನಾವು ಈ ಹೋರಾಟದಲ್ಲಿ ಕೈ ಜೋಡಿಸುತ್ತಿದ್ದೇವೆ ..!, ಯಾರು ..ಸೌಜನ್ಯಳನ್ನು ಅತ್ಯಾಚಾರ ಮಾಡಿದ್ರು ಎಂಬುವುದೇ ನಮ್ಮ ಈ ಹುಡುಕಾಟದ ಉದ್ದೇಶವಾಗಿದೆ ಎಂದು ಹೇಳಿದರು.
ಧರ್ಮಸ್ಥಳದ ಸಾಮಾಜಿಕ ಜವಾಬ್ದಾರಿ ಅನುಶಾಸನ ಬದ್ಧವಾದ ಹೊಣೆಗಾರಿಕೆ ಹೊತ್ತವರು, ಮನೆ ಬಾಗಿಲಲ್ಲಿರುವಂತಹ ತಮ್ಮ ಮನೆಯ ಮಗುವಿನ ಮೇಲಾಗಿರುವ ಅತ್ಯಾಚಾರ, ಆ ಮಗುವಿಗೆ ಸಂಬಂಧ ಪಟ್ಟವರಿಗೆ ಸಾಂತ್ವನ ಹೇಳುವುದು ಅವರ ಕರ್ತವ್ಯವಾಗಿದೆ. ಆ ಮಗುವಿಗೋಸ್ಕರ ನಾನು ಇದ್ದೇನೆ ಎನ್ನೋದು ಹೆಗ್ಗಡೆ ಅವರ ಬಾಯಿಂದ ಬರಲಿ, ಆ ಮಾತು ಅವರ ಬಾಯಿಯಿಂದ ಬಂದರೆ ನಾವು ಅವರಿಗೆ ಋಣಿಗಳಾರ್ತೀವಿ ಎಂದು ಹೇಳಿದರು. ಸೌಜನ್ಯ ಹೋರಾಟ ಧರ್ಮದ ಕಾರ್ಯ, ಈ ಮಗುವಿಗೆ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ರಾವ್ ಬಂಧನದ ಬಳಿಕ ಭಾರೀ ಪ್ರತಿಭಟನೆ ನಡೆದಿತ್ತು. ಸೌಜನ್ಯ ಪೋಷಕರಿಗೆ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲವಾಗಿ ನಿಂತಿದ್ದರು. ನೈಜ ಆರೋಪಿಗಳನ್ನು ತಿರುಗಲು ಬಿಟ್ಟು ನಿರಪರಾಧಿಯನ್ನು ಬಂಧಿಸಲಾಗಿದೆ ಎಂದು ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವಹಿಸಲಾಗಿತ್ತು. ಕಳೆದ ಹನ್ನೊಂದು ವರ್ಷದ ಬಳಿಕ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಪ್ರಕಟವಾಗಿತ್ತು.