ನ್ಯೂಸ್ ನಾಟೌಟ್: ಆಯತಪ್ಪಿ ಹಳ್ಳಕ್ಕೆ ಬಿದ್ದು ಯುವಕರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಪಡೀಲ್ ಅಳಪೆ ಎಂಬಲ್ಲಿ ಭಾನುವಾರ ನಡೆದಿದೆ.
ಮೃತ ಯುವಕರನ್ನು ಅಳಪೆ ನಿವಾಸಿ ವರುಣ್ (27), ಎಕ್ಕೂರು ನಿವಾಸಿ ವೀಕ್ಷಿತ್ (28) ಎಂದು ಗುರುತಿಸಲಾಗಿದೆ. ಭಾನುವಾರ ರಜಾ ದಿನದ ಹಿನ್ನೆಲೆಯಲ್ಲಿ ಆರು ಜನ ಯುವಕರ ತಂಡ ಅಳಪೆ ಪಡ್ಪು ಬಳಿಯಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ವೀಕ್ಷಿತ್ ಆಯತಪ್ಪಿ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ತಕ್ಷಣ ಧಾವಿಸಿದ ವರುಣ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಂಕನಾಡಿ ಪೊಲೀಸರು, ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನೀರಿನಿಂದ ಮೇಲೆಕೆತ್ತಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಆಸ್ಪತ್ರೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವಾನ ಹೇಳಿದರು.