ನ್ಯೂಸ್ ನಾಟೌಟ್: ಪ್ರೀತಿಗೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಹೇಳಲಾಗುತ್ತದೆ. ಉದಾಹರಣೆ ಎಂಬಂತೆ 76ರ ಮುದುಕನೊಬ್ಬ 46 ವರ್ಷದ ಮಹಿಳೆಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸುಮಾರು ಎಂಟು ವರ್ಷಗಳ ಕಾಲ ಒಬ್ಬರನ್ನೊಬ್ಬರನ್ನು ಪ್ರೀತಿಸಿದ ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಈ ವಿಭಿನ್ನ ಮದುವೆ ಒಡಿಶಾದ ಗಂಜಂ ಜಿಲ್ಲೆಯಲ್ಲಿ ನಡೆದಿದ್ದು, ಭಂಜನಗರ್ ಕೋರ್ಟ್ನಲ್ಲಿ ಜುಲೈ 19ರಂದು ಹಿರಿಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.
ಒಡಿಶಾದ ಗಂಜಾಂ ಜಿಲ್ಲೆಯ ಸಂಖೆಮುಂಡಿ ಮಂಡಲದ ಅಡಪದ ಗ್ರಾಮದ ರಾಮಚಂದ್ರ ಸಾಹು ಎಂಬ 76 ವರ್ಷದ ವ್ಯಕ್ತಿ 47 ವರ್ಷದ ಸುಲೇಖಾ ಸಾಹು ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರಾಮಚಂದ್ರ ಸಾಹು ಅವರ ಮೊದಲ ಪತ್ನಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದಾರೆ. ಒಬ್ಬ ಮಗಳು ತನ್ನ ಅತ್ತೆ ಮನೆಯಲ್ಲಿದ್ದರೆ, ಇನ್ನೊಬ್ಬ ಮಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಾಮಚಂದ್ರ ಕಳೆದ 18 ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದರು. ಹಾಗಾಗಿ ಮತ್ತೆ ಮದುವೆಯಾಗಲು ನಿರ್ಧರಿಸಿದ್ದರು ಎಂಟು ವರ್ಷಗಳ ಹಿಂದೆ ಭಂಜನಗರ ವ್ಯಾಪ್ತಿಯ ಕುಳಗಾರ ಗ್ರಾಮದ ತ್ರಿನಾಥ ಸಾಹು ಎಂಬವರ ಪುತ್ರಿ ಸುರೇಖಾ (46) ಅವರನ್ನು ಮದುವೆ ಸಮಾರಂಭದಲ್ಲಿ ನೋಡಿದ್ದರು. ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಉಂಟಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಾಮಚಂದ್ರನ ಮದುವೆ ಪ್ರಸ್ತಾಪಕ್ಕೆ 40 ವರ್ಷದ ಅವಿವಾಹಿತರಾಗಿದ್ದ ಸುಲೇಖಾ ಕೂಡ ಒಪ್ಪಿದ್ದಾರೆ. ಇಬ್ಬರೂ ಹಲವಾರು ವರ್ಷಗಳಿಂದ ಫೋನ್ನಲ್ಲಿ ಮಾತನಾಡುತ್ತಿದ್ದರು. ಅಂತಿಮವಾಗಿ, ಅವರು ಜುಲೈ 19 ರಂದು ಭಂಜ್ನಗರ ನ್ಯಾಯಾಲಯದಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ. ಇದಾದ ಬಳಿಕ ದೇವಸ್ಥಾನದಲ್ಲಿ ವಿಧಿವಿಧಾನಗಳ ಪ್ರಕಾರ ಮತ್ತೆ ಮದುವೆ ನಡೆದಿದೆ ಎನ್ನಲಾಗಿದೆ.
” ನನಗೆ 76 ವರ್ಷ. ನನ್ನ ಮೊದಲ ಹೆಂಡತಿ ಬಹಳ ವರ್ಷಗಳ ಹಿಂದೆ ತೀರಿಕೊಂಡಳು. ನಾನು ಮತ್ತು ಸುಲೇಖಾ ಕುಲಾಡ್ ಗ್ರಾಮದಲ್ಲಿ ನಡೆದ ಹಬ್ಬದಂದು ಭೇಟಿಯಾದೆವು. ಅಂದು ಸುಲೇಖಾಳನ್ನು ನೋಡಿದಾಗಿನಿಂದ ಅವಳನ್ನು ಮದುವೆಯಾಗಬೇಕೆಂದು ಅನಿಸಿತು. ಆಗ ಸುಲೇಖಾ ನನ್ನ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡಳು. ಈಗ ತುಂಬಾ ಖುಷಿಯಾಗಿದ್ದೇವೆ” ಎಂದು ವರ 76 ವರ್ಷದ ರಾಮಚಂದ್ರ ಸಾಹು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.