ನ್ಯೂಸ್ ನಾಟೌಟ್ :ರೈತ ಮಹಿಳೆಯರನ್ನು ಭೇಟಿಯಾದ ಕಾಂಗ್ರೆಸ್ ನಾಯಕಿ ಸೋನಿಯಾ (Sonia Gandhi )ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.ಈ ವೇಳೆ ತಮಾಷೆಯಿಂದ ಮಾತನಾಡಿದ ರೈತ ಮಹಿಳೆಯರು ಸೋನಿಯಾ ಗಾಂಧಿಯವರಿಗೆ ರಾಹುಲ್ ಗಾಂಧಿ ಅವರ ಮದುವೆಗೆ ಸಂಬಂಧ ಪಟ್ಟ ಹಾಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ರೈತ ಮಹಿಳೆಯರು ಸೋನಿಯಾ ಗಾಂಧಿಯವರಿಗೆ ರಾಹುಲ್ ಗಾಂಧಿ (Rahul Gandhi) ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಹಾಸ್ಯವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಜೋರಾಗಿ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ, ನೀವೇ ಅವನಿಗೆ ಹುಡುಗಿಯನ್ನು ಹುಡುಕಿ ಎಂದು ಹೇಳಿದ್ದಾರೆ. ಇನ್ನು ಪಕ್ಕದಲ್ಲೇ ನಿಂತಿದ್ದ ರಾಹುಲ್ ಗಾಂಧಿ ಅವರು ಸಂಭಾಷಣೆಗೆ ಸ್ಮೈಲ್ ಕೊಡುತ್ತಾ “ಮುಂದೆ ನೋಡುವ” ಎಂದು ನಗುತ್ತಲೇ ಉತ್ತರಿಸಿದ್ದಾರೆ.
ಅಷ್ಟಕ್ಕೂ ಇಷ್ಟೆಲ್ಲಾ ಸಂಭಾಷಣೆ ನಡೆದಿದ್ದೆಲ್ಲಿ ಗೊತ್ತಾ? ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ.ಈ ಔತಣ ಕೂಟ ಕಾರ್ಯಕ್ರಮದಲ್ಲಿ ಸೋನಿಪತ್ ರೈತ ಮಹಿಳೆಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತ ಮಹಿಳೆಯರು ಸಂತಸರಾಗಿದ್ದು, ಇದೊಂದು ಅಪೂರ್ವ ಘಳಿಗೆ ಎಂದಿದ್ದಾರೆ.ಜತೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಸರಳ ನಡೆಯನ್ನು ಶ್ಲಾಘಿಸಿದ್ದಾರೆ.
ಈ ಬಗ್ಗೆ ರಾಹುಲ್ ಗಾಂಧಿ ಅವರು ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇಂದು ನಾನು, ಅಮ್ಮ, ಪ್ರಿಯಾಂಕ ನೆನಪಿಡುವ ದಿನ, ಏಕೆಂದರೆ ದೆಹಲಿಯಲ್ಲಿ ಇಂದು ಬೆಳಿಗ್ಗೆ ಸೋನಿಪತ್ನ ರೈತ ಸಹೋದರಿಯರ ದರ್ಶನವಾಗಿದೆ. ಮನೆಯಲ್ಲಿ ಅವರೊಂದಿಗೆ ಭೋಜನ, ಒಂದಿಷ್ಟು ಹಾಸ್ಯ, ಹರಟೆ ಎಲ್ಲವೂ ನಡೆಯಿತು. ಅವರು ನಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಮೂಲ್ಯವಾದ ಉಡುಗೊರೆಗಳನ್ನು ನೀಡಿದ್ದಾರೆ. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮತ್ತು ಬಹಳಷ್ಟು ಪ್ರೀತಿ ಎಲ್ಲವನ್ನು ನಮ್ಮ ಜತೆಗೆ ಹಂಚಿಕೊಂಡಿದ್ದಾರೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಈ ಹಿಂದೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಹರಿಯಾಣದ ಸೋನಿಪತ್ಗೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ಜನರ ಜತೆಗೆ ಸಂವಾದ ನಡೆಸಿದ್ದರು. ಅವರ ಕಷ್ಟಗಳನ್ನು ಆಲಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಅವರು ನಾನು ದೆಹಲಿಯಲ್ಲಿ ಸೋನಿಪತ್ ರೈತ ಮಹಿಳೆಯರನ್ನು ಭೇಟಿ ಮಾಡುತ್ತೇನೆ. ಜತೆಗೆ ಅವರಿಗಾಗಿ ಔತಣಕೂಟದ ವ್ಯವಸ್ಥೆಯನ್ನು ಮಾಡುತ್ತೇನೆ ಎನ್ನುವ ಭರವಸೆ ನೀಡಿದ್ದರು.ಅದರಂತೆಯೇ ಅವರಿಗೆ ಔತಣ ಕೂಟವೇರ್ಪಡಿಸಿ ಗಮನ ಸೆಳೆದಿದ್ದಾರೆ.