ನ್ಯೂಸ್ ನಾಟೌಟ್ : ತಾನು ಆರೋಗ್ಯವಾಗಿರಬೇಕು ಹಾಗೂ ವಯಸ್ಸಾಗೋದು ಗೊತ್ತಾಗಬಾರದು ಎನ್ನುತ್ತಾ ಮನುಷ್ಯ ಜಿಮ್ , ಯೋಗಕ್ಕೆ ಮೊರೆ ಹೋಗುತ್ತಾನೆ.ಮಾತ್ರವಲ್ಲ ಆಹಾರ ಕ್ರಮಗಳಲ್ಲಿಯೂ ವ್ಯತ್ಯಾಸ ಮಾಡಿಕೊಳ್ಳುತ್ತಾನೆ.ಇದೀಗ 75ನೇ ವಯಸ್ಸಲ್ಲೂ ಫಿಟ್ ಆ್ಯಂಡ್ ಫೈನ್ ಆಗಿರುವ ಲಾಲೂ ಪ್ರಸಾದ್ ಯಾದವ್ ಅವರ ಫಿಟ್ನೆಸ್ ಗುಟ್ಟು ರಟ್ಟಾಗಿದೆ.ಹೌದು,ಕಳೆದ ಕೆಲ ಸಮಯಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಇದೀಗ ಚೇತರಿಸಿಕೊಂಡು ಈ ವಯಸ್ಸಲ್ಲೂ ಅವರು ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ವಿಶಿಷ್ಟ ಶೈಲಿಗೆ ಭಾರಿ ಪ್ರಸಿದ್ಧವಾದವರು. ಕೆಲ ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಅವರು ಕ್ರಿಕೆಟ್ ಆಡುತ್ತಾ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದರು.ಆದರೆ ಇದೀಗ ಮತ್ತೊಮ್ಮೆ ಪ್ರಚಾರದಲ್ಲಿದ್ದಾರೆ.ಆದರೆ ಈ ಬಾರಿ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಇಲ್ಲ,ಬದಲಾಗಿ ಶಟಲ್ ಬ್ಯಾಟ್ ಗಮನಸೆಳೆಯುತ್ತಿದೆ.
ಹೌದು, ಲಾಲು ಪ್ರಸಾದ್ ಯಾದವ್ ಅವರಿಗೆ ಇದೀಗ 75 ವರ್ಷ.ಈ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು,ನೆಟ್ಟಿಗರು ಈ ಬಗ್ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಕೆಲವರು ಹೀಗೆ ನಗುನಗುತ್ತಾ ಆರೋಗ್ಯವಂತರಾಗಿರಿ ಎಂದು ಶುಭ ಹಾರೈಸಿದ್ದಾರೆ.
ಲಾಲು ಅವರ ಪುತ್ರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಲಾಲು ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು,ಫೋಟೋಗಳಲ್ಲಿ ಲಾಲು ಪ್ರಸಾದ್ ಯಾದವ್ ಬ್ಯಾಡ್ಮಿಂಟನ್ ಆಡುತ್ತಿರುವ ಚಿತ್ರಗಳನ್ನು ಕಾಣಬಹುದು ಇದನ್ನು ಕಂಡಾಗ ಲಾಲು ಪ್ರಸಾದ್ ಯಾದವ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ತೋರಿಸುತ್ತದೆ.
ಕಳೆದ ಕೆಲ ಸಮಯಗಳ ಹಿಂದೆ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಲಾಲು ಪ್ರಸಾದ್ ಅವರು ಸಿಂಗಾಪುರಕ್ಕೆ ತೆರಳಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಲಾಲು ಪುತ್ರಿ ರೋಹಿಣಿ ಆಚಾರ್ಯ ಇವರಿಗೆ ಕಿಡ್ನಿ ದಾನ ಮಾಡಿದ್ದರು. ದೆಹಲಿಯಲ್ಲಿ ನೆಲೆಸಿರುವ ಲಾಲು ಸದ್ಯ ಪಾಟ್ನಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಈ ಸಮಯದಲ್ಲಿ ಅವರು ನಿರಂತರವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಕ್ರೀಡೆಯ ಬಗ್ಗೆ ಅಪಾರ ಒಲವು. ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಪಾಟ್ನಾದ ಮೊಯಿನುಲ್ ಹಕ್ ಸ್ಟೇಡಿಯಂನಲ್ಲಿ ಕೀನ್ಯಾ ಮತ್ತು ಜಿಂಬಾಬ್ವೆ ನಡುವೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ನಡೆದಿದ್ದು, ಭಾರೀ ಮಳೆಯ ಪರಿಣಾಮ ಪಂದ್ಯ ನಡೆಯುವ ಬಗ್ಗೆ ಅನುಮಾನವಿತ್ತು. ಆಗ ಲಾಲು ಪ್ರಸಾದ್ ಯಾದವ್ ಹೆಲಿಕಾಪ್ಟರ್ ಮೂಲಕ ಇಡೀ ಮೈದಾನವನ್ನು ಒಣಗಿಸಲು ಸೂಚನೆ ನೀಡಿದ್ದರು.ಇದು ಅವರ ಕ್ರೀಡೆ ಮೇಲಿನ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ.ಹೀಗಾಗಿ ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬಿಡುವು ಸಿಕ್ಕಾಗಲೆಲ್ಲ ಕ್ರೀಡೆ ಮೂಲಕ ಸಮಯ ಕಳೆಯುತ್ತಾರೆ.
ಲಾಲು ಪ್ರಸಾದ್ ಯಾದವ್ ಬಿಹಾರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಈ ಸಮಯದಲ್ಲಿ ಅವರು ಕೈಯಲ್ಲಿ ಬ್ಯಾಟ್ ಹಿಡಿದ ಚಿತ್ರ ಭಾರಿ ಜನಮನ್ನಣೆ ಪಡೆದಿತ್ತು. ಇದೀಗ ಕೈಯಲ್ಲಿ ರಾಕೆಟ್ ಹಿಡಿದು ಎಪ್ಪತೈದನೇ ವಯಸ್ಸಿನಲ್ಲೂ ನಾನು ಆರೋಗ್ಯವಂತನಾಗಿ ಫಿಟ್ ಅಂಡ್ ಫೈನ್ ಆಗಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ.