ನಗರ ಪಾಲಿಕೆ ಅಧಿಕಾರಿಗಳ ಮೇಲಿನ ಸಿಟ್ಟಿನಿಂದ ವ್ಯಕ್ತಿಯೊಬ್ಬರು ವಾರ್ಡ್ ಕಚೇರಿಗೆ ಹಾವನ್ನು ಬಿಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಕ್ರೋಶ ಹೊರಹಾಕಿದ ಘಟನೆ ಗ್ರೇಟರ್ ಹೈದರಾಬಾದ್ ನಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಪತ್ ಕುಮಾರ್ ಎಂಬ ವ್ಯಕ್ತಿ ಜಿಎಚ್ಎಂಸಿ ವಾರ್ಡ್ ಕಚೇರಿಗೆ ತೆರಳಿ ಕಚೇರಿಯ ಟೇಬಲ್ ಮೇಲೆ ಹಾವನ್ನು ಬಿಟ್ಟಿದ್ದಾರೆ.
ಸ್ಥಳೀಯ ನಿವಾಸಿಗಳ ಮನೆಗಳಿಗೆ ಹಾವು ಮತ್ತಿತರ ಜೀವಿಗಳು ನುಗ್ಗುತ್ತಿರುವ ಸಮಸ್ಯೆ ಬಗೆಹರಿಸಲು ಪೌರಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಸಂಪತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ವಾಲ್ ಪ್ರದೇಶದಲ್ಲಿ ಹಾವುಗಳ ಉಪಟಳದ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಹಲವಾರು ದೂರುಗಳನ್ನು ನೀಡಲಾಗಿದ್ದರೂ, ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಹತಾಶೆಯಿಂದ ಅವರು ಹಾವನ್ನು ಬಿಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ, ಜಿಎಚ್ಎಂಸಿಯಲ್ಲಿ ಹಾವು ಹಿಡಿಯುವವರ ತಂಡವೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಬೇರೆ ಕಡೆಯಿಂದ ಉರಗ ರಕ್ಷಕರನ್ನು ಕರೆಸಿ ಹಾವನ್ನು ಹಿಡಿಸಿದ್ದಾರೆ ಎನ್ನಲಾಗಿದೆ.