ನ್ಯೂಸ್ ನಾಟೌಟ್ : ಜಪಾನಿನ ವ್ಯಕ್ತಿಯೊಬ್ಬ ತನ್ನನ್ನು ತಾನು ನಾಯಿಯಾಗಿ ಪರಿವರ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ತಮ್ಮ ಹೆಸರನ್ನು ಟೋಕೊ ಎಂದು ಬದಲಾಯಿಸಿಕೊಂಡಿದ್ದು, ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಇದಕ್ಕಾಗಿ ಆತ ಸರಿ ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಟೋಕೋ ಎಂದು ಕರೆಯಲ್ಪಡುವ ಈ ವ್ಯಕ್ತಿ ನಾಯಿಯಾಗಲು ಎರಡು ಮಿಲಿಯನ್ ಯೆನ್ ಡಾಲರ್ (A$22,000) ಖರ್ಚು ಮಾಡಿದ್ದಾನೆ.
ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದರೆ, ಈ ಸಂಪೂರ್ಣ ವೆಚ್ಚವು 18,09,714 ರೂ. ಆಗುತ್ತದೆ. ಟಿವಿ ಜಾಹೀರಾತುಗಳು ಮತ್ತು ಚಲನಚಿತ್ರಗಳಿಗೆ ವೇಷಭೂಷಣಗಳನ್ನು ತಯಾರಿಸುವ ಜಪಾನಿನ ಕಂಪನಿ ಜೆಪೆಟ್ ಈ ಮನುಷ್ಯನಿಗೆ ನಾಯಿಯ ವೇಷಭೂಷಣವನ್ನು ತಯಾರಿಸಿದೆ. ಇದನ್ನು ತಯಾರಿಸಲು ಸುಮಾರು 40 ದಿನಗಳನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
ಕಂಪನಿ ಹೇಳುವಂತೆ, “ಕೋಲಿ ನಾಯಿಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಿಜವಾದ ನಾಯಿಯಂತೆ ಕಾಣುತ್ತದೆ” ಎಂದು ಹೇಳಿದೆ. ವ್ಯಕ್ತಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ‘ಐ ವಾಂಟ್ ಟು ಬಿ ಎ ಅನಿಮಲ್’ ಎಂಬ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ. ಚಾನಲ್ 31,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು ಈ ವೀಡಿಯೊಗಳನ್ನು 1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊವನ್ನು ಒಂದು ವರ್ಷದ ಹಿಂದೆ ಚಿತ್ರೀಕರಿಸಲಾಗಿದೆ.
ಆದರೆ ಇತ್ತೀಚೆಗೆ ಮರು-ಅಪ್ಲೋಡ್ ಮಾಡಲಾಗಿದೆ. ಇದನ್ನು ಜರ್ಮನ್ ಟಿವಿ ಸ್ಟೇಷನ್ RTL ಸಂದರ್ಶನದ ಭಾಗವಾಗಿ ಚಿತ್ರೀಕರಿಸಲಾಗಿದೆ. ವೀಡಿಯೊದ ಆರಂಭದಲ್ಲಿ ಆ ವ್ಯಕ್ತಿ, “ನಾನು ಕೋಲಿಯಾಗಿದ್ದೇನೆ. ಬಾಲ್ಯದಿಂದಲೂ ನಾನು ಪ್ರಾಣಿಯಾಗಬೇಕೆಂಬ ನನ್ನ ಕನಸು ನನಸಾಗಿದೆ” ಎಂದು ಹೇಳುತ್ತಾನೆ. “ನಾನು ನಾಯಿಯಾಗಲು ಬಯಸುವುದು ವಿಚಿತ್ರವಾಗಿದೆ ಎಂದು ಜನರು ಭಾವಿಸುತ್ತಾರೆ. ಅದಕ್ಕಾಗಿಯೇ ನಾನು ನನ್ನ ನಿಜವಾದ ಮುಖವನ್ನು ತೋರಿಸಲು ಸಾಧ್ಯವಿಲ್ಲ” ಎಂದು ಮಿರರ್ ಮಾಧ್ಯಮಕ್ಕೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಆತ ಹೇಳಿಕೊಂಡಿದ್ದಾನೆ.