ನ್ಯೂಸ್ ನಾಟೌಟ್ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಉಡುಪಿ ಕಾಲೇಜೊಂದರಲ್ಲಿ ವಾಶ್ ರೂಂನಲ್ಲಿ ವಿಡಿಯೋ ಪ್ರಕರಣ ಬೇರೆಯದ್ದೇ ಆಯಾಮವನ್ನು ಪಡೆದುಕೊಳ್ಳುತ್ತಿದೆ.ಇದೀಗ ಭಯೋತ್ಪಾದನೆ (Terrorism) ಮತ್ತು ಲವ್ ಜಿಹಾದ್ (Love Jihad) ಟ್ವಿಸ್ಟ್ ಸಿಕ್ಕಿದೆ.ಈ ಪ್ರಕರಣ ಗಂಭೀರವಾಗಿ ಚಿಂತನೆ ಮಾಡುವ ವಿಚಾರವಾಗಿದ್ದು, ಈ ಕೃತ್ಯದ ಹಿಂದೆ ಭಯೋತ್ಪಾದಕರ ಸಂಚು ಇರಬಹುದು ಮತ್ತು ಇದೊಂದು ಲವ್ ಜಿಹಾದ್ ಕೈವಾಡವಿರಬಹುದು ಎಂದು ಬಿಜೆಪಿ ಹೇಳಿದೆ.ಮಾತ್ರವಲ್ಲ ಈ ಬಗ್ಗೆ ಎನ್ಐಎ ತನಿಖೆಗೂ ಆಗ್ರಹಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojari) ಹಾಗೂ ವಿ.ಸುನಿಲ್ ಕುಮಾರ್ (Sunil Kumar) ಅವರು ಗಂಭೀರ ಆರೋಪ ಮಾಡಿದ್ದು,ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಉಡುಪಿ ವಿಡಿಯೊ ಪ್ರಕರಣದ ಬಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ” ಇಡೀ ದೇಶದ ಜನ ತಲೆ ತಗ್ಗಿಸುವಂತಹ ವಿಚಾರವಿದು.ಕಳೆದ ಕೆಲ ತಿಂಗಳುಗಳಿಂದ ಈ ರೀತಿ ವಿಡಿಯೊ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರೇ ಬಹಿರಂಗವಾಗಿ ಹೇಳುತ್ತಿದ್ದಾರೆ.ಆದರೆ, ಇದುವರೆಗೆ ಸಮರ್ಪಕವಾಗಿ ಕ್ರಮ ಕೈಗೊಳ್ಳದಿರುದೇಕೆ? ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕೈಯನ್ನು ಸರ್ಕಾರವೇ ಕಟ್ಟಿ ಹಾಕಿದೆಯೇ? ತನಿಖೆಯಾಗದಂತೆ ನೋಡಿಕೊಳ್ಳಲಾಗುತ್ತಿದೆಯೇ? ಎಂದು ಆರೋಪಿಸಿದ್ದಾರೆ.
ʻʻಇಂಥ ಘಟನೆ ನಡೆದಾಗ ಸಮಗ್ರ ತನಿಖೆಯಾಗಬೇಕು. ಆರೋಪಗಳು ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನಗಳಾಗಬೇಕು. ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು. ಆದರೆ ಇಲ್ಲಿ ಮುಚ್ಚಿ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.ಇದು ಲವ್ ಜಿಹಾದ್ ಪ್ರಕರಣ ಇರಬಹುದು ಹಾಗೂ ಇದರ ಹಿಂದೆ ಭಯೋತ್ಪಾದಕರ ಕೈವಾಡ ಇರಬಹುದು ಹೀಗಾಗಿ ಈ ಪ್ರಕರಣವನ್ನು ರಾಷ್ಟೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ನಾನು ಗೃಹ ಸಚಿವರಾದ ಜಿ. ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಮಾತನಾಡಿರುವ ಮಾಜಿ ಸಚಿವ ,ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ” ಉಡುಪಿಯ ಇಡೀ ಘಟನೆಯನ್ನು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿವೆ. ಘಟನೆ ನಡೆದು ಎಂಟು ದಿನಗಳ ಕಾಲ ಎಫ್ಐಆರ್ ದಾಖಲು ಮಾಡಿಲ್ಲ ಅಂದರೆ ಸಹಜವಾಗಿ ದೊಡ್ಡ ಅನುಮಾನವೇ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದರು.
ಉಡುಪಿಯ ಕಾಲೇಜ್ ವೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರ ಟಾಯ್ಲೆಟ್ ಬಳಕೆಯನ್ನು ಚಿತ್ರೀಕರಿಸಿಕೊಂಡ ಆರೋಪ ಎದುರಿಸುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಆಗಾಗ ಮೊಬೈಲ್ ಬದಲಾಯಿಸುತ್ತಿದ್ದರು ಎಂದು ಅಲ್ಲಿನ ಕಾಲೇಜು ವಿದ್ಯಾರ್ಥಿಗಳೇ ಆರೋಪ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಸುನಿಲ್ ಕುಮಾರ್ ಆಗ್ರಹಿಸಿದರು. ಯಾವುದೇ ಒತ್ತಡಕ್ಕೆ ಮಣಿಯದೆ ಎಲ್ಲ ಆಯಾಮದಲ್ಲೂ ತನಿಖೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ತಪ್ಪಿತಸ್ಥರು ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು.ಮುಸಲ್ಮಾನ ಹೆಣ್ಣು ಮಕ್ಕಳು ಅಂತಾ ಸರ್ಕಾರ ಕೇಸ್ ಮುಚ್ಚಿ ಹಾಕುವ ಕೆಲಸ ಮಾಡ್ತಿದೆಯಾ..? ಎಂಬ ಪ್ರಶ್ನೆಯು ರಾಜ್ಯದ ಜನರಲ್ಲಿ ಮೂಡುತ್ತಿದೆ. ಹಿಜಾಬ್ ಘಟನೆ ಆದಾಗ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಸುಪ್ರೀಂ ಕೋರ್ಟ್ಗೆ ಹೋಗುತ್ತಾರೆ ಎಂದರೆ ಇದರ ಹಿಂದೆ ಎಷ್ಟು ದೊಡ್ಡ ಶಕ್ತಿ ಗಳು ಕೆಲಸ ಮಾಡಿದ್ದವು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಹಾಗೇಯೆ ವಿಡಿಯೋ ಪ್ರಕರಣದ ಹಿಂದೆ ಕೂಡಾ ದೊಡ್ಡ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನ ಮೂಡಿದೆʼʼ ಎಂದು ಸುನಿಲ್ ಕುಮಾರ್ ಹೇಳಿದರು.
ಸಿದ್ದರಾಮಯ್ಯ ಸರ್ಕಾರಕ್ಕೆ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರು ಅಮಾಯಕರಂತೆ ಕಾಣುತ್ತಾರೆ.ಆದರೆ ಬಜರಂಗ ದಳದ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತದೆ.ಉಡುಪಿಯ ಪ್ರಕರಣ ತನಿಖೆ ಆಗಬೇಕು ಎಂದು ಆಗ್ರಹಿಸಿದ ರಶ್ಮಿ ಸಾಮಂತ್ ಅವರ ಮನೆಗೆ ಪೊಲೀಸರು ರಾತ್ರೋ ರಾತ್ರಿ ಹೋಗ್ತಾರೆ ಇದು ಬಹಳ ದುರ್ದೈವದ ಸಂಗತಿ ಎಂದು ಹೇಳಿದ ಅವರು ವೀರಾವೇಶದ ಭಾಷಣ ಮಾಡುವ ಸಿದ್ದರಾಮಯ್ಯವರಿಗೆ ವಿದ್ಯಾರ್ಥಿನಿ ಮನೆಗೆ ಹೋಗೋ ತಾಕತ್ತಿಲ್ವ?ʼʼ ಎಂದು ಪ್ರಶ್ನಿಸಿದರು.
ʻʻಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು, ಸುಮ್ಮನೆ ಆದರೆ, ಮುಂದಿನ ದಿನಗಳಲ್ಲಿ ಅದರ ಅಪಾಯವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.