ನ್ಯೂಸ್ ನಾಟೌಟ್: ದೇಶ-ವಿದೇಶದಾದ್ಯಂತ ಭಾರಿ ಸುದ್ದಿ ಮಾಡಿ ಭರ್ಜರಿ ಯಶಸ್ಸು ಕಂಡ ಕಾಂತಾರ ಸಿನಿಮಾ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಕಾಂತಾರದ ಸಿನಿಮಾದಲ್ಲಿ ನಟಿಸಿದ್ದ ಶಿವನನ್ನು ಬಂಧಿಸಿದ್ದ ಜೈಲನ್ನು ಕೆಡವಲು ಇದೀಗ ಉಡುಪಿಯ ನಗರಸಭೆ ಆದೇಶಿಸಿದೆ.
ಕಾಂತಾರ ಸಿನಿಮಾ ಚಿತ್ರೀಕರಣ ಸಂದರ್ಭ ಉಡುಪಿಯಲ್ಲಿರುವ 117 ವರ್ಷಗಳ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡವನ್ನು ಜೈಲನ್ನಾಗಿ ಬಳಸಲಾಗಿತ್ತು. ಸ್ವಾತಂತ್ರ ಪೂರ್ವದಲ್ಲಿ ನಿರ್ಮಿಸಿದ್ದ ಈ ಕಟ್ಟಡಕ್ಕೆ ತನ್ನದೇ ಆದ ಇತಿಹಾಸವಿದೆ. ಅಲ್ಲದೇ ಒಂದು ಕಾಲದಲ್ಲಿ ಇದು ಉಡುಪಿಯ ಹಳೆ ಸಬ್ಜೈಲು ಆಗಿತ್ತು. ನಗರಸಭೆ, ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದು, ಅದಕ್ಕಾಗಿ ಪಾರಂಪರಿಕ ಜೈಲನ್ನು ಕೆಡವಲು ಮುಂದಾಗಿದೆ. ಸದ್ಯ ಕಟ್ಟಡದ ರಚನೆಯ ದಾಖಲೀಕರಣ ಕಾರ್ಯವನ್ನು ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಕ್) ಮಂಗಳೂರು ಶಾಖೆ ಮಾಡುತ್ತಿದೆ.
ನಗರಸಭೆಯ ಈ ಕ್ರಮಕ್ಕೆ ಆರ್ಕಿಟೆಕ್ಟ್ಗಳು ಹಾಗೂ ಕಲಾವಿದರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಉಡುಪಿ, ಮಂಗಳೂರಿನ 12 ಕಲಾವಿದರು ಕಟ್ಟಡದ ಕಲಾಕೃತಿಗಳನ್ನು ರಚಿಸಿ ಜಾಗೃತಿ ಮೂಡಿಸುತ್ತಿದ್ದು ಪರ್ಯಾಯವಾಗಿ ಮ್ಯೂಸಿಯಂ, ಪಾರಂಪರಿಕ ವಸ್ತುಸಂಗ್ರಹಾಲಯ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಕಲಾವಿದರಲ್ಲದೇ, ಉಡುಪಿಯ ನಾಗರಿಕರೂ ಕಟ್ಟಡ ನೆಲಸಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾರಂಪರಿಕ ಕಟ್ಟಡವನ್ನು ಯಾವುದೇ ಕಾರಣಕ್ಕೂ ಕೆಡವದಂತೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.