ನ್ಯೂಸ್ ನಾಟೌಟ್ :ದೇಶಾದ್ಯಂತ ಟೊಮೆಟೋ ದರ ಗಗನಕ್ಕೇರಿದೆ.ಒಂದು ಕೆಜಿ ಟೋಮೆಟೋ 150 ರೂ. ಸಮೀಪಿಸಿದೆ.ಆದರೂ ಟೋಮೆಟೋ ಬೆಳೆಯುವ ರೈತರಿಗೆ ಸಂಕಷ್ಟ ತಪ್ಪಲಿಲ್ಲ.ಕಾರಣ ವಿಪರೀತ ಕಳ್ಳರ ಹಾವಳಿಯಿಂದಾಗಿ ಜಮೀನಿನಿಂದಲೇ ಟೋಮೆಟೋವನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ..!
ಮೊದಮೊದಲು ಚಿನ್ನ ,ಹಣ ಕದಿಯುತ್ತಿದ್ದ ಕಳ್ಳರು ಈಗೀಗ ಟೋಮೆಟೋ ಕದಿಯಲೂ ಶುರು ಮಾಡಿದ್ದಾರೆ. ಹೌದು,ಹಾಸನದಲ್ಲಿ ಸರಿಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 2 ಲಕ್ಷ ರೂ ಮೌಲ್ಯದ ಟೊಮೆಟೋ ಬೆಳೆಯನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರೆ,ಹಲವು ಕಡೆ ಟೊಮೆಟೋ ಬೆಳೆದ ರೈತ ದಿನವಿಡೀ ಟೊಮೆಟೋವನ್ನು ಕಾಯುವ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಟೋಮೆಟೋ ಹಣ್ಣನ್ನು ಬೆಳೆದ ರೈತರು ಕಂಗಾಲಾಗಿರುವುದು ಸುಳ್ಳಲ್ಲ.ಹಾಸನ ಜಿಲ್ಲೆಯ ಬೇಲೂರು (Belur) ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದಾದರೂ ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೋವನ್ನು ಕಳ್ಳರು ಕದ್ದೊಯ್ದಿದ್ದು, ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕೆಲವೇ ನಿಮಿಷಗಳಲ್ಲಿ ಕೊಯ್ದು ಕಳ್ಳರು ಬಡ ರೈತರ ಹೊಟ್ಟೆಗೆ ಮಣ್ಣೆರೆಚುತ್ತಿದ್ದಾರೆ.
ಗ್ರಾಮದಲ್ಲಿ ಸೋಮಶೇಖರ್ ಎಂಬವವರು ಸುಮಾರು 2 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು.ಯಾವತ್ತು ಕಡಿಮೆ ಬೆಲೆ ಇರುತ್ತಿದ್ದ ಟೋಮೆಟೋಗೆ ಅಬ್ಬಾ ಈ ಬಾರಿಯಾದರು ಒಳ್ಳೆ ದರಕ್ಕೆ ಮಾರಾಟ ಮಾಡಬಹುದು ಅಂದುಕೊಂಡಿದ್ದ ರೈತ ಸೋಮಶೇಖರ್ ಮತ್ತು ಅವರ ಏಕೈಕ ಪುತ್ರ ಧರಣಿಗೆ ಭಾರಿ ಆಘಾತವಾಗಿದೆ. ತಮ್ಮ ಜೀವನದಲ್ಲಿಯೇ ಅತ್ಯಧಿಕ ಕೃಷಿ ಆದಾಯವನ್ನು ನಿರೀಕ್ಷಿಸಿದ್ದ ಇವರಿಗೆ ಕಳ್ಳರು ಪಂಗನಾಮವನ್ನೇ ಹಾಕಿದ್ದು,ಈ ಘಟನೆ ಇನ್ನಿಲ್ಲದ ಬೇಸರವನ್ನುಂಟು ಮಾಡಿದೆ. ಇವರು ಕಷ್ಟ ಪಟ್ಟು ಬೆಳೆದ ಟೋಮೆಟೋ ಹಣ್ಣನ್ನು ಕಳೆದ ಮೂರೇ ದಿನದಲ್ಲಿ ಕೊಯ್ದು ಮಾರಾಟ ಮಾಡಿದ ಘಟನೆ ಕಲ್ಲು ಹೃದಯವೂ ಕರಗಿಸುವಂತಿದೆ.ಮುಗ್ಧ ರೈತರು ಮಳೆ ಬಿಸಿಲನ್ನು ಲೆಕ್ಕಿಸದೇ , ಬೆವರಿಳಿಸುತ್ತಾ, ಶ್ರಮ ಹಾಕಿ , ಕ್ರೀಮಿ ಕೀಟಗಳಿಂದ ಗಿಡಗಳನ್ನು ಸಂರಕ್ಷಿಸಿ ಬೆಳೆಸಲು ಅದೆಷ್ಟು ತಾಳ್ಮೆ ವಹಿಸಬೇಕಾತ್ತದೆ ಅನ್ನುವ ಕಷ್ಟ ಒಬ್ಬ ರೈತನಿಗೆ ಮಾತ್ರ ಗೊತ್ತಿರೋದು.
ಇವಿಷ್ಟು ಮಾತ್ರವಲ್ಲ,ಸೋಮಶೇಖರ್ ಐದು ವರ್ಷಗಳ ಹಿಂದೆ ಎಡಗೈ ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈಯಲ್ಲಿ ಕೆಲಸ ಮಾಡುತ್ತಿದ್ದರು.ಹೇಗೋ ಟೊಮೆಟೋ ಬೆಳೆದು ಜೀವನ ಸಾಗಿಸುತ್ತಿದ್ದರು. ಕಾಡು ಪ್ರಾಣಿ, ಪಕ್ಷಿಗಳಿಂದ ರಕ್ಷಣೆ ಮಾಡಲು ನಾನಾ ತಂತ್ರಗಳನ್ನು ಮಾಡಿದ್ದರು. ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವಲು ಕಾಯುತ್ತಿದ್ದರು. ಇದೇ ಕಾರಣಕ್ಕಾಗಿ ಅವರು ತಮ್ಮ ಕೃಷಿ ಭೂಮಿಯಲ್ಲೇ ಉಪಹಾರ ಮತ್ತು ಊಟ ಸೇವಿಸುತ್ತಿದ್ದರು. ಆದರೂ ಬೆಳೆ ಕಳ್ಳತನವಾಗಿದೆ. ಕಳ್ಳರು ಗಿಡಗಳನ್ನು ಹಾಳು ಮಾಡಿದ್ದು, ಗಿಡದಿಂದ ಅಪಾರ ಪ್ರಮಾಣದ ಹೂವು, ಮೊಗ್ಗುಗಳು ಬಿದ್ದಿದ್ದರಿಂದ ಸಂಪೂರ್ಣ ಬೆಳೆ ನಷ್ಟವಾಗಿದೆ. ಹಾಸನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಮೀನಿನಲ್ಲಿದ್ದ ಟೊಮೆಟೊ ಬೆಳೆ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ.
ರಾತ್ರಿ ವೇಳೆ ಜಮೀನಿಗೆ ನುಗ್ಗಿರುವ ಕಳ್ಳರು 50ರಿಂದ 60 ಬ್ಯಾಗ್ನಷ್ಟು ಟೊಮೆಟೋ ಕೊಯ್ದಿದ್ದಾರೆ ಎನ್ನುವ ಮಾಹಿತಿಯಿದೆ.ಸೋಮಶೇಖರ್ ತಮ್ಮ ಜಮೀನಿನ ಬಳಿ ಹೋದಾಗ ಟೊಮೆಟೋ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.ಸೋಮಶೇಖರ್ ಅವರ ಜಾಗದಲ್ಲಿ ನಿಂತು ಯೋಚಿಸಿದಾಗ ಏನನ್ನಿಸಬೇಡ.ಒಂದು ಕ್ಷಣ ಬರಸಿಡಿಲೇ ಬಡಿದಂತಾಗದಿರದು.ಕಣ್ಣೀರು ಬಾರದಿರದು.ಎಷ್ಟೇ ಸಮಾಧಾನ ಪಡಿಸಿದರೂ ರೈತರ ಆ ನೋವನ್ನು ಮರೆಸುವುದಕ್ಕೇ ಸಾಧ್ಯವೇ? ಕಳ್ಳತನದ ಕುರಿತು ಸೋಮಶೇಖರ್ ಹಳೇಬೀಡು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದಿದ್ದು ಸ್ಥಳದಲ್ಲಿ ಮದ್ಯದ ಬಾಟಲಿಗಳು ಮತ್ತು ಸಿಗರೇಟ್ ಪ್ಯಾಕ್ಗಳನ್ನು ಪತ್ತೆಹಚ್ಚಿದ್ದಾರೆ.ಕಳ್ಳತನದಲ್ಲಿ ಸ್ಥಳೀಯರ ಕೈವಾಡವಿರಬಹುದು ಎಂದು ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ಹಿರಿಯ ತೋಟಗಾರಿಕಾ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೊ ಕೆಜಿಗೆ 110 ರಿಂದ 150 ರೂ ಇದ್ದು. ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಒಣಹವೆಯಿಂದಾಗಿ ಶೇ.50 ರಷ್ಟು ಬೆಳೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.