ನ್ಯೂಸ್ ನಾಟೌಟ್: ಅಕ್ಕಿ, ಬೆಲ್ಲ, ಸಕ್ಕರೆ, ನಾಣ್ಯ, ತೆಂಗಿನಕಾಯಿ ಹೀಗೆ ನಾನಾ ವಸ್ತುಗಳ ತುಲಾಭಾರ ನಡೆಯುತ್ತದೆ, ಕೆಲವರು ಚಿನ್ನ-ಬೆಳ್ಳಿಯಿಂದ ತುಲಾಭಾರ ಮಾಡಿಸಿಕೊಳ್ಳುವುದೂ ಉಂಟು. ಆದರೆ ಇಲ್ಲಿ ಟೊಮೆಟೋದಲ್ಲಿ ಮಗಳ ತುಲಾಭಾರ ನೆರೆವೇರಿಸಲಾಗಿದೆ. ಆದರೆ ಟೊಮೆಟೊ ಬೆಲೆ ಗಗನಕ್ಕೇರಿರುವ ಈ ವೇಳೆಯಲ್ಲಿ ಈ ಟೊಮೆಟೊ ತುಲಾಭಾರ ಎಲ್ಲೆಡೆ ವೈರಲ್ ಆಗಿದೆ.
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ನೂಕಲಮ್ಮ ದೇವಸ್ಥಾನದಲ್ಲಿ ದುಬಾರಿ ಬೆಲೆಯ ಟೊಮೆಟೊ ತುಲಾಭಾರ ನಡೆದಿದೆ. ಅನಕಾಪಲ್ಲಿ ಪಟ್ಟಣದ ಮಲ್ಲ ಜಗ್ಗ ಅಪ್ಪರಾವ್ ಮತ್ತು ಮೋಹಿನಿ ದಂಪತಿಯು ತಮ್ಮ ಪುತ್ರಿ ಭವಿಷ್ಯಾಳಿಗೆ ಟೊಮೆಟೊಗಳಲ್ಲಿ ತುಲಾಭಾರ ನಡೆಸಿದ್ದಾರೆ.
ಈ ತುಲಾಭಾರದಲ್ಲಿ ಆಕೆಯ ತೂಕಕ್ಕೆ ಸಮನಾಗಿ 51 ಕೆಜಿ ಟೊಮೆಟೊ ಇಡಲಾಗಿದ್ದು, ಅದರ ಜೊತೆ ಬೆಲ್ಲ ಮತ್ತು ಸಕ್ಕರೆಯನ್ನು ಕೂಡ ಇಡಲಾಗಿತ್ತು. ತುಲಾಭಾರಕ್ಕೆ ಬಳಸಿದ ಟೊಮೆಟೊ ಮತ್ತು ಸೆಕ್ಕರೆಯನ್ನು ನೂಕಲಮ್ಮ ದೇವಸ್ಥಾನದಲ್ಲಿ ಪ್ರತಿನಿತ್ಯ ನೀಡುವ ಅನ್ನದಾನಕ್ಕೆ ಬಳಸಲಾಗುವುದು ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 120 ರಿಂದ 150 ರೂಪಾಯಿ ಇದ್ದುದರಿಂದ ತುಲಾಭಾರದಲ್ಲಿ ದರ್ಶನಕ್ಕೆ ಬಂದ ಭಕ್ತರು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿರುವ ಈ ವೇಳೆಯಲ್ಲಿ ಟೊಮೆಟೊ ತುಲಾಭಾರ ವಿಶೇಷವಾಗಿ ಕಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ತುಲಾಭಾರದ ಫೋಟೋ ವೈರಲ್ ಆಗಿದೆ.
ಟೊಮೆಟೊ ಬೆಲೆ ಏರಿಕೆಯಿಂದಾಗಿ ಕೆಲವು ಹೋಟೆಲ್ಗಳು ತಮ್ಮ ಆಹಾರಗಳಲ್ಲಿ ಟೊಮೆಟೊ ಬಳಸುವುದನ್ನು ಸಹ ಕಡಿಮೆ ಮಾಡಿವೆ.