ನ್ಯೂಸ್ ನಾಟೌಟ್ : ಚಿನ್ನಾಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ನುಗ್ಗಿ ಮಾಲೀಕನ ಗಮನ ಬೇರೆಡೆಗೆ ಸೆಳೆದು ನಕಲಿ ಚಿನ್ನವಿಟ್ಟು ಅಸಲಿ ಚಿನ್ನ ಕದಿಯುತ್ತಿದ್ದ ಚಾಲಾಕಿ ಕಳ್ಳಿಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಪಾಮರಹಳ್ಳಿಯ ಕೈರುನ್ (46) ಹಾಗೂ ಜೈರಾಭಿ (36) ಇಬ್ಬರು ಕಳ್ಳಿಯರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 22.34 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಥಬೀದಿಯಲ್ಲಿರುವ ಚಿನ್ನಾಭರಣದ ಅಂಗಡಿಯೊಂದಕ್ಕೆ ಜೂ.5ರಂದು ಆರೋಪಿಗಳು ಬಂದಿದ್ದು, ಚಿನ್ನಾಭರಣ ಕಳ್ಳತನವಾಗಿತ್ತು. ಈ ವೇಳೆ ಬುರ್ಖಾ ಧರಿಸಿದ್ದ ಆರೋಪಿಗಳೊಂದಿಗೆ ಓರ್ವ ಯುವಕ ಸಹ ಇದ್ದು, ಈತ ವ್ಯಾಪಾರಿಯನ್ನು ಮಾತನಾಡಿಸುತ್ತಾ ದಾರಿ ತಪ್ಪಿಸುತ್ತಿದ್ದ.ಇದೇ ಸರಿಯಾದ ಸಂದರ್ಭವೆಂದು ಮಹಿಳೆಯರು ಸುಮಾರು 22.4 ಗ್ರಾಂ ಚಿನ್ನವನ್ನು ಎಗರಿಸಿದ್ದರು.
ಪ್ರಕರಣ ದಾಖಲಾದ ತಕ್ಷಣದಲ್ಲೇ ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಡಿವೈಎಸ್ಪಿ ಆರ್.ವಿ ಗಂಗಾಧರಪ್ಪ, ಕುಶಾಲನಗರ ವೃತ್ತದ ಇಸ್ಪೆಕ್ಟರ್ ಬಿ.ಜಿ ಮಹೇಶ್, ನಗರ ಠಾಣಾಧಿಕಾರಿ ರವೀಂದ್ರ ಇವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಅಭಿನಂದಿಸಿದ್ದಾರೆ. ಅಲ್ಲದೇ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಜಿಲ್ಲಾ ಪೊಲೀಸ್ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.