ನ್ಯೂಸ್ ನಾಟೌಟ್: ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ಹಲವು ಬಾರಿ ಸಾಭೀತಾಗಿದೆ. ಇಲ್ಲೊಂದು ವಿಚಿತ್ರವಾದ ಪ್ರೇಮ ಕಥೆ ಹಲವರ ಚರ್ಚೆಗೆ ಕಾರಣವಾಗಿದೆ. ಗಮನ ಸೆಳೆದಿದೆ. ತನ್ನನ್ನು ದುಡಿದು ಸಾಕಿದರೆ ಸಾಕು ಎನ್ನುವುದು ಹಲವರ ಆಸೆಯಾದರೆ, ಇನ್ನು ಕೆಲವರು ಆಸ್ತಿ ಅಂತಸ್ತು ಬಯಸುತ್ತಾರೆ ಹೊರತು ತನ್ನ ಪ್ರಿಯಕರ ಕಳ್ಳನಾಗಿರಲಿ ಎಂದು ಯಾರು ತಾನೆ ಬಯಸುತ್ತಾರೆ. ಆದರೆ ಬ್ರೆಜಿಲಿನ ಯುವತಿಯೊಬ್ಬಳು ತನ್ನ ಫೋನ್ ಕದ್ದ ಕಳ್ಳನನ್ನೇ ಪ್ರೀತಿಸಿದ್ದಾಳೆ.
ಬ್ರೆಜಿಲ್ ಮೂಲದ ಇಮ್ಯಾನುಯೆಲಾ ಎನ್ನುವ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಳ್ಳನೊಬ್ಬ ಬಂದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಏನು ಮಾಡದೆ ಇಮ್ಯಾನುಯೆಲಾ ಅಸಹಾಯಕಳಾಗಿದ್ದಳು.
ಆದರೆ ಮೊಬೈಲ್ ಕದ್ದುಕೊಂಡು ಹೋದ ಕಳ್ಳನ ಮನಸ್ಸು, ಯುವತಿಯನ್ನು ನೋಡಿ ಬದಲಾಗಿದೆ. ಮೊಬೈಲ್ ಕಸಿದುಕೊಂಡು ಹೋಗಿದ್ದ ಕಳ್ಳ, ಮೊಬೈಲ್ ಸ್ಕ್ರೀನ್ ಮೇಲೆ ಯುವತಿಯ ಫೋಟೋವನ್ನು ನೋಡಿ, ಆಕೆಯ ಅಂದವನ್ನು ನೋಡಿ ಮರುಳಾಗಿದ್ದಾನೆ.. ಆ ಬಳಿಕ ಆಕೆಯನ್ನು ಕಾದು ಬೇಟಿಯಾಗಿ ಕಳ್ಳತನ ಮಾಡಿದ್ದಕ್ಕೆ ತಪ್ಪೊಪ್ಪಿಕೊಂಡು ಪ್ರೇಮ ನಿವೇದನೆ ಮಾಡಿದ್ದಾನೆ ಮತ್ತು ಆಕೆ ಒಪ್ಪಿಕೊಂಡಿದ್ದಾಳೆ.
ಇಬ್ಬರ ನಡುವಿನ ಪ್ರೇಮ ಕಥೆ ವೈರಲ್ ಆಗಿದ್ದು, ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಅವರ ಬಗೆಗಿನ ಪ್ರೇಮ ಕಥೆಯ ವಿಡಿಯೋ ವೈರಲ್ ಆಗಿದೆ.
“ನಾನು ಫೋನ್ ಕದ್ದು, ಆ ಫೋನ್ ನಲ್ಲಿ ಅವಳ ಫೋಟೋವನ್ನು ನೋಡಿದಾಗ, ಅವಳ ಮೇಲೆ ನನಗೆ ಮನಸ್ಸಾಯಿತು. ಇಂಥ ಸುಂದರ ಯುವತಿಯನ್ನು ನಾನೆಂದು ನೋಡಿಲ್ಲ. ಆ ಬಳಿಕ ಪೋನ್ ಕದ್ದ ಬಗ್ಗೆ ನನಗೆ ಪಶ್ಚಾತ್ತಾಪವಾಯಿತೆಂದು” ಯುವಕ ಹೇಳಿದ್ದಾನೆ. ಇಬ್ಬರು ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಆದರೆ ಮಾಜಿ ಕಳ್ಳನೊಂದಿಗೆ ತನ್ನ ಮಗಳು ರಿಲೇಷನ್ ಶಿಪ್ ನಲ್ಲಿದ್ದಾಳೆ ಎನ್ನುವುದರ ಬಗ್ಗೆ ಯುವತಿ ಪೋಷಕರಿಗೆ ಗೊತ್ತಿದೆಯೋ, ಇಲ್ವೋ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ವರದಿ ತಿಳಿಸಿದೆ.