ನ್ಯೂಸ್ ನಾಟೌಟ್ ಸುಳ್ಯ: ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಹೆಚ್ಚು ಬೆಳೆಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.
ಸುಳ್ಯದ ಕನ್ನಡ ಭವನದಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ 2022-23ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದಲ್ಲಿ ಶೇ. 100 ಅಂಕ ಪಡೆದ ವಿದ್ಯಾರ್ಥಿಗಳ ಗೌರವಾರ್ಪಣೆ ಮಾಡುವ ಕಾರ್ಯಕ್ರಮವನ್ನು ಕ.ಸಾ.ಪ ಆಯೋಜನೆ ಮಾಡಿದ ಆರಂಭದಲ್ಲಿ ಕೇವಲ 12 ಮಕ್ಕಳು ಮಾತ್ರ ಇಂಥ ಸನ್ಮಾನಕ್ಕೆ ಭಾಜನರಾಗಿದ್ದರು. ಇಂದು 91 ಮಂದಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಡಾ. ಕೆ.ವಿ. ಚಿದಾನಂದ ಹೇಳಿದರು.
ಬಳಿಕ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಸನ್ಮಾನ ಪತ್ರ, ಶಾಲು ನೀಡಿ ಗೌರವಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಯು.ಕೆ.ಶೀತಲ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷೆ ಮೀನಾಕ್ಷಿ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಸಾಹಿತ್ಯ ಪರಿಷತ್ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ. ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ಕಾರ್ಯಕ್ರಮ ಸಂಯೋಜಕ ರಮೇಶ್ ನೀರಬಿದಿರೆ ಉಪಸ್ಥಿತರಿದ್ದರು. ಕನ್ನಡ ಮಾಧ್ಯಮದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಕನ್ನಡ ಶಿಕ್ಷಕರು ಮತ್ತು ಗೌರವ ಕನ್ನಡ ಶಿಕ್ಷಕರನ್ನು ಗೌರವಿಸಲಾಯಿತು. ತಾಲೂಕಿನ ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.