ನ್ಯೂಸ್ ನಾಟೌಟ್: ಸುಳ್ಯ ಬಸ್ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದಿದ್ದ ಕುಡುಕನೊಬ್ಬ ರಾದ್ದಾಂತ ಮಾಡಿದ್ದಾನೆ. ತಮ್ಮ ಪಾಡಿಗೆ ತಾವು ಸುಮ್ಮನೆ ಕುಳಿತುಕೊಂಡು ಬಸ್ ದಾರಿಯನ್ನೇ ಎದುರು ನೋಡುತ್ತಿದ್ದ ಪ್ರಯಾಣಿಕರಿಗೆ ಕಿರಿಕ್ ಮಾಡಿದ್ದಾನೆ. ಮಾತ್ರವಲ್ಲ ಪೊಲೀಸ್ ದೂರು ಕೊಟ್ಟರೂ ಕ್ಯಾರೇ ಅನ್ನಲ್ಲ ಎಂದು ಗರ್ಜಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಸುಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಕುಡುಕನ ಚಳಿ ಬಿಡಿಸಿದ್ದಾರೆ. ಮಾತ್ರವಲ್ಲ ಬಸ್ ನಿಲ್ದಾಣದಲ್ಲಿ ಇನ್ನು ಮುಂದೆ ಕಾಣಿಸಿಕೊಂಡು ಜನರಿಗೆ ತೊಂದರೆ ಕೊಟ್ರೆ ಕಂಬಿ ಹಿಂದಿರಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಸುಳ್ಯ ಬಸ್ ನಿಲ್ದಾಣಕ್ಕೆ ಭಾನುವಾರ ರಾತ್ರಿ 8 ಗಂಟೆಗೆ ಕುಡುಕ ಏಕಾಏಕಿ ಕುಡಿದು ಪ್ರವೇಶಿಸಿದ್ದಾನೆ. ತನ್ನ ಎದುರಿಗೆ ಯಾರೆಲ್ಲ ಸಿಗುತ್ತಾರೋ ಅವರೊಂದಿಗೆಲ್ಲ ಅನುಚಿತವಾಗಿ ವರ್ತಿಸಿದ್ದಾನೆ. ನೀನು ಎಲ್ಲಿಗೆ ಹೋಗೋದು..? ಯಾವ ಬಸ್ ನಿನಗೆ..? ಯಾಕೆ ಇಲ್ಲಿ ನಿಂತಿದ್ದೀಯಾ ಎಂದೆಲ್ಲ ಪ್ರಶ್ನಿಸಿದ್ದಾನೆ. ಮಾತ್ರವಲ್ಲ ಅವರಿಗೆ ಆವಾಜ್ ಕೂಡ ಹಾಕಿದ್ದಾನೆ. ಕುಡುಕನ ಕಿರಿಕ್ ನಿಂದ ರೋಸಿ ಹೋದ ಅಲ್ಲಿದ್ದ ಪ್ರಯಾಣಿಕರೊಬ್ಬರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕುಡುಕನಿಗೆ ಚೆನ್ನಾಗಿಯೆ ಬೆವರಿಳಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ತಣ್ಣಗಾದ ಕುಡುಕ ಎರಡು ಬೈಗುಳ ತಿಂದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಕೆಲವು ಕುಡುಕರು ಬಸ್ ನಿಲ್ದಾಣದಲ್ಲಿ ಕುಡಿದು ಬಂದು ರಾದ್ದಾಂತ ಎಬ್ಬಿಸುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ಮುಜುಗರವಾಗುತ್ತದೆ. ಹೀಗಾಗಿ ಇಂತಹ ಕುಡುಕ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.