ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು , ಹರಿಹರ – ಕೊಲ್ಲಮೊಗ್ರ ವ್ಯಾಪ್ತಿಯಲ್ಲಿ ಹಲವೆಡೆ ಹಾನಿಯಾಗಿದೆ. ಅಲ್ಲದೆ ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಇಲ್ಲದೆ ಜನರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯುತ್ ಮತ್ತು ನೆಟ್ ವರ್ಕ್ ಸಂಪರ್ಕ ಕಡಿತವಾಗಿ ಹರಿಹರ ಮತ್ತು ಕೊಲ್ಲಮೊಗ್ರದ ವ್ಯಾಪ್ತಿಯ 70 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದರಿಂದಾಗಿ ಈ ಭಾಗದ ಜನತೆ ಕತ್ತಲಲ್ಲೇ ದಿನ ಕಳೆಯುವಂತಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪುತ್ತೂರು ಸಹಾಯಕ ಆಯುಕ್ತರು ಗಿರೀಶ್ ನಂದನ್, ಸುಳ್ಯ ತಹಶೀಲ್ದಾರ್ ಮಂಜುನಾಥ್ ಎಂ. ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಸ್ವಲ್ಪ ಮಳೆ ಬಂದರೆ ಸಾಕು ಹರಿಹರ ಮತ್ತು ಕೊಲ್ಲಮೊಗ್ರ ಭಾಗದಲ್ಲಿ ಬಿಎಸ್ಎನ್ಎಲ್ ಟವರ್ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಬಿಎಸ್ಎನ್ಎಲ್ ಸೇವೆಯನ್ನೇ ನಂಬಿದ ಈ ಭಾಗದ ಜನತೆಗೆ ಸಮಸ್ಯೆಯಾಗಿದೆ. ಬಿಎಸ್ಎನ್ಎಲ್ ನೆಟ್ ವರ್ಕ್ ಇದ್ದರೂ ಟವರ್ಗೆ ಅಳವಡಿಸಿದ ಬ್ಯಾಟರಿ ಕಾರ್ಯನಿರ್ವಹಿಸುವುದಿಲ್ಲ. ಕಳೆದ 5 ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸಂಬಂಧಪಟ್ಟವರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ದುರಸ್ತಿ ನಡೆಸುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಗ್ರಾಮಸ್ಥರ ಸಮಸ್ಯೆ ಆಲಿಸಿದ ಸಹಾಯಕ ಆಯುಕ್ತ, ತಕ್ಷಣ BSNL ಟವರ್ ನ ಬಳಿ ಭೇಟಿ ನೀಡಿ ವೀಕ್ಷಿಸಿದರು. ನಂತರ BSNL ಅಧಿಕಾರಿಗಳನ್ನು ಸಂಪರ್ಕಿಸಿ ಕೊಲ್ಲಮೊಗ್ರ ಹಾಗೂ ಹರಿಹರದ BSNL ಟವರ್ ಗೆ ಹೊಸ ಬ್ಯಾಟರಿ ಅಳವಡಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಬ್ಯಾಟರಿಗೆ ಹಣದ ವ್ಯವಸ್ಥೆಯನ್ನು ನೀಡುವಂತೆ ತಹಸೀಲ್ದಾರ್ ಮಂಜುನಾಥ್ ಬಳಿ ಸೂಚಿಸಿದರು.
ಸಹಾಯಕ ಆಯುಕ್ತರು ಭೇಟಿ ನೀಡಿ ಕರೆ ಮಾಡಿ ಬರಲು ಹೇಳಿದರೂ BSNL ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರಲೇ ಇಲ್ಲ. ಬಳಿಕ ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ BSNL ನ ಡಿಜಿಎಂ ಅವರನ್ನು ಸಂಪರ್ಕಿಸಿ ಗ್ರಾಮದ ಸಮಸ್ಯೆಯನ್ನು ವಿವರಿಸಿದರೂ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ. ಎಲ್ಲಾ ಅಧಿಕಾರಿಗಳು BSNL ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು BsNL ಅಧಿಕಾರಿಗಳು ಅಹಂಕಾರದ ಪರಮಾವಧಿ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ.
ಈ ಸಂದರ್ಭ ಆರ್.ಐ ನಾಗರಾಜ್, ಗ್ರಾಮಕರಣಿಕ ಯತೀನ್ ಎ., ಜಯಂತ ಬಾಳುಗೋಡು, ಪ್ರಿಯಾ ಹರಿಹರ ಉಪಸ್ಥಿತರಿದ್ದರು.