ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಭಾರತೀಯ ಜನ ಪಾರ್ಟಿ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಬೆಳಗಾವಿ ಚಿಕ್ಕೋಡಿಯ ಪರಮಪೂಜ್ಯ ಆಚಾರ್ಯ ಜೈನಮುನಿ ಕಾಮಾನಂದ ನಂದಿ ಮಹಾರಾಜ್ ಬರ್ಬರ ಹತ್ಯೆ ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಹಂತಕರಿಗೆ ಉಗ್ರ ಶಿಕ್ಷೆ ವಿಧಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮೈಸೂರು ಟಿ. ನರಸಿಂಹ ಪುರದ ಹಿಂದು ಧರ್ಮದ ಕಾರ್ಯವನ್ನು ಸಕ್ರೀಯವಾಗಿ ಮಾಡುತ್ತಿದ್ದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕನ ಬರ್ಬರ ಹತ್ಯೆ ಅಮಾನವೀಯ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ನ ದುರಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಎ.ವಿ. ತೀರ್ಥರಾಮ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ 50 ದಿನಗಳೊಳಗೆ ರಾಜ್ಯದಲ್ಲಿ ಹಲವಾರು ಅಮಾಯಕರ ಹತ್ಯೆಗಳು ನಡೆದಿವೆ. ಸಾರ್ವಜನಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಜನಸಾಮಾನ್ಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಅರಾಜಕತೆ ಮತ್ತು ದುರಾಡಳಿತ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನೆ ಬಳಿಕ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ವೆಂಕಟ್ ಒಲಳಂಬೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಎನ್. ಮನ್ಮಥ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಹಾಗೂ ಬಿಜೆಪಿ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.