ನ್ಯೂಸ್ ನಾಟೌಟ್: ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಆಹಾರದ ಕುರಿತು ನೀಡಿದ ಹೇಳಿಕೆ ಟ್ರೋಲ್ಗೆ ಗುರಿಯಾಗಿತ್ತು. ಸುಧಾ ಮೂರ್ತಿ ಹೇಳಿಕೆ ಆಹಾರದ ಕುರಿತ ಪರ ವಿರೋಧ ಚರ್ಚೆಗೂ ಕಾರಣವಾಗಿತ್ತು. ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುಧಾಮೂರ್ತಿ ಅವರನ್ನು ಟ್ರೋಲ್ ಮಾಡಲಾಗಿದೆ.
ಸುಧಾ ಮೂರ್ತಿ ಅವರು ಎಲ್ಲೇ ಹೋದರೂ ಸರಳತೆಯಿಂದ ಇರುತ್ತಾರೆ ಅನ್ನುವ ಮಾತುಗಳನ್ನು ಅವರ ಅಭಿಮಾನಿಗಳು ಮಾತ್ರವಲ್ಲದೆ ಹೆಚ್ಚಿನ ಎಲ್ಲಾ ವರ್ಗದವರು ಕೇಳುತ್ತಾರೆ. ಹೆಚ್ಚಾಗಿ ದುಬಾರಿ ಬೆಲೆಯ ರೇಷ್ಮೆ ಸೀರೆಯನ್ನೇ ಉಡುವ ಸುಧಾಮೂರ್ತಿ ಅವರು ವಿದೇಶಕ್ಕೆ ಹೋದಾಗಲೂ ರೇಷ್ಮೆ ಸೀರೆಯನ್ನೇ ಉಡುವ ಮೂಲಕ ಇಲ್ಲಿನ ನೆಲದ ಸಂಪ್ರದಾಯದ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಹಾರದ ವಿಚಾರದಲ್ಲಿ ಸುಧಾ ಮೂರ್ತಿ ಅವರು ನೀಡಿದ ಹೇಳಿಕೆ ಬಳಿಕ ಅವರ ಸೀರೆಯ ಬಗ್ಗೆಯೂ ಟ್ರೋಲ್ ಮಾಡಲಾಗಿದೆ.
ಫುಡ್ ಬ್ಲಾಗರ್ ಕುನಾಲ್ ವಿಜ್ಜಯಕರ್ ನಡೆಸಿಕೊಡುವ ‘ಖಾನೇ ಮೇ ಕ್ಯಾ ಹೈ?’ ಶೋನಲ್ಲಿ ಇತ್ತೀಚೆಗೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಆಡಿದ ಮಾತೊಂದು ಟ್ವಿಟ್ಟರ್ನಲ್ಲಿ ಟ್ರೆಂಡ್ ಸೃಷ್ಟಿಸಿ ನಿನ್ನೆ ಟ್ರೋಲ್ ಆಗಿತ್ತು.
‘ಖಾನೇ ಮೇ ಕ್ಯಾ ಹೈ?’ ಶೋನಲ್ಲಿ ಭಾಗವಹಿಸಿದ್ದ ಸುಧಾಮೂರ್ತಿ ತಾವು ಫುಡ್ ಲವರ್ ಅಂತಾನೂ ಹೇಳಿಕೊಂಡಿದ್ದರು.
ಅಲ್ಲದೇ ಈ ವೇಳೆ ಅವರು ‘ನಾನು ಪ್ಯೂರ್ ಸಸ್ಯಾಹಾರಿಯಾಗಿದ್ದು, ಮೊಟ್ಟೆ, ಬೆಳ್ಳುಳ್ಳಿ ಕೂಡ ತಿನ್ನೋದಿಲ್ಲ. ನಾನು ಶುದ್ಧ ಸಸ್ಯಾಹಾರಿಯಾಗಿರುವ ಕಾರಣ ವಿದೇಶಗಳಿಗೆ ತೆರಳುವಾಗ ಕೆಲವು ಆಹಾರ ಪದಾರ್ಥಗಳನ್ನು ಒಯ್ಯುತ್ತೇನೆ. ರೆಸ್ಟೋರೆಂಟ್, ಹೋಟೆಲ್ಗೆ ಹೋದಾಗ ನಾನ್ವೆಜ್ಗೆ ಬಳಸಿರುವ ಸ್ಪೂನ್ ಅನ್ನೇ ಕೊಟ್ಟರೆ ಅಂತಾ ಭಯವಾಗುತ್ತೆ, ಹೀಗಾಗಿ ನಾನೇ ಸ್ಪೂನ್ ಅನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು.
ಸುಧಾಮೂರ್ತಿ ಅವರು ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿ ಸುಧಾಮೂರ್ತಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಸಸ್ಯಾಹಾರದ ಶ್ರೇಷ್ಠತೆಯ ಬಗ್ಗೆ ಮಾತನಾಡಲು ಹೋಗಿ ಮಾಂಸಾಹಾರವನ್ನು ನಿಕೃಷ್ಟವಾಗಿ ಬಿಂಬಿಸುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅನೇಕರು ಅಸಮಾಧಾನಗೊಂಡಿದ್ದರು.
ಈ ಬಗ್ಗೆ ಡ್ರಂಕ್ ಜರ್ನಲಿಸ್ಟ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಸುಧಾಮೂರ್ತಿ ಅವರು ಹಸಿರು ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, ಈ ರೇಷ್ಮೆ ಸೀರೆಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ ಎಂದು ಸುಧಾ ಮೂರ್ತಿ ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ. ಅವುಗಳನ್ನು ರೇಷ್ಮೆ ಹುಳಗಳ ತ್ಯಾಜ್ಯದಿಂದ ತಯಾರಿಸಲಾಗುತ್ತದೆ ಅದನ್ನು ತೊಟ್ಟಾಗ ನೀವು ಮಾಂಸ ಸ್ಪರ್ಶಿಸುವುದಿಲ್ಲವೆ ಎಂದು ಟ್ರೋಲ್ ಮಾಡಲಾಗಿದೆ. ವಿದೇಶ ಪ್ರವಾಸದ ಸಮಯದಲ್ಲಿ ತನ್ನ ಊಟವನ್ನು ತಾನೇ ಹೊತ್ತೊಯ್ಯುವ ಬಗ್ಗೆ ಸುಧಾಮೂರ್ತಿ ಅವರು ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿ ಈ ಟೀಕೆ ಮಾಡಲಾಗಿದೆ. ಈ ಪೋಸ್ಟ್ ನಂತರ ಅನೇಕರು ರಿಟ್ವೀಟ್ ಮಾಡಿ ಸುಧಾ ಮೂರ್ತಿ ಅವರನ್ನು ಟ್ರೋಲ್ ಮಾಡಿದ್ದಾರೆ.