ನ್ಯೂಸ್ ನಾಟೌಟ್: ದ.ಕ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಶಾಲೆಗೆ ರಜೆ ನೀಡುವ ಅಧಿಕಾರವನ್ನು ಆಯ ತಾಲೂಕು ಆಡಳಿತದ ಸುಪರ್ದಿಗೆ ನೀಡಲಾಗಿತ್ತು. ಅದರಂತೆ ಜಿಲ್ಲೆಯ ಬಹುತೇಕ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಪರೀಕ್ಷೆಗಳು ಬದಲಾವಣೆ ಮಾಡಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನೆರೆ ನೀರಿನಲ್ಲೆ ಪರೀಕ್ಷೆಗೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಂಡು ಬಂತು.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣದಲ್ಲಿ ಕುಮಾರಧಾರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೇ ಸ್ನಾನಘಟ್ಟ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಈ ನಡುವೆ ಪದವಿ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಮೊಣಕಾಲುವರೆಗೆ ನೀರಿದ್ದರೂ ಒದ್ದೆಯಾಗಿಕೊಂಡೇ ಪರೀಕ್ಷೆಗೆ ಹಾಜರಾಗಬೇಕಾಯಿತು. ರಸ್ತೆಯಲ್ಲಿ ನೀರು ತುಂಬಿದ್ದರೂ ಅಪಾಯಕಾರಿ ರೀತಿಯಲ್ಲಿ ವಿದ್ಯಾರ್ಥಿಗಳು ದಾಟಿಕೊಂಡು ಹೋಗುವ ದೃಶ್ಯ ಕಂಡುಬಂದಿದೆ.