ನ್ಯೂಸ್ ನಾಟೌಟ್: ಸೌಜನ್ಯ ಕೊಲೆ ಪ್ರಕರಣ ನಡೆದು 11 ವರ್ಷವಾದರು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಇತ್ತೀಚಿಗೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ಬೆನ್ನಲ್ಲೇ ಪ್ರಕರಣವು ಇದೀಗ ಕಾನತ್ತೂರಿನ ದೈವ ಮೆಟ್ಟಿಲೇರಿದೆ.
ಇದೀಗ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಕಾರಣಕ್ಕೆ ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಕಾನತ್ತೂರಿನ ದೈವದ ಎದುರು ಆಣೆ ಪ್ರಮಾಣ ಮಾಡಿ ಬಂದಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಈ ಮೂವರು ಕೂಡ ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದರು. ಮಾತ್ರವಲ್ಲ ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ ಹೇಳಿದಂತೆ ಕಾನತ್ತೂರಿನಲ್ಲಿ ಪ್ರಮಾಣ ಮಾಡಿದ್ದೇವೆ. ಧೈರ್ಯವಿದ್ದರೆ ಅವರೂ ಕೂಡ ಬಂದು ಪ್ರಮಾಣ ಮಾಡಲಿ ಎಂದು ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ತಿಳಿಸಿದ್ದಾರೆ.
ದೈವದ ಚಾವಡಿಯ ಎದುರು ನಿಂತು ಆಣೆ ಪ್ರಮಾಣವನ್ನು ಮಾಡಲಾಗಿದೆ. ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ತಾವು ಸೌಜನ್ಯ ಪ್ರಕರಣದಲ್ಲಿ ತಪ್ಪು ಮಾಡಿಲ್ಲ ಎಂದು ದೈವದ ಎದುರು ಪ್ರಾರ್ಥನೆ ಮಾಡಿದ್ದಾರೆ. ಇದಕ್ಕೂ ಮೊದಲು ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಪ್ರಸಿದ್ಧ ಕ್ಷೇತ್ರವಾದ ಕಾಸರಗೋಡಿನ ಕಾನತ್ತೂರು ಶ್ರೀ ನಾಲ್ವರ್ ದೇವಸ್ಥಾನಮ್ ಸನ್ನಿಧಿಗೆ ತೆರಳಿ ಆಣೆ ಪ್ರಮಾಣ ಮಾಡುವುದಕ್ಕೆ ಒಂದು ದಿನಾಂಕ ನಿಗದಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಉತ್ತರಿಸಿದ್ದ ಆಡಳಿತ ಮಂಡಳಿ ಈಗಾಗಲೇ ನೀವು ಒಮ್ಮೆ ಬಂದು ದೂರು ನೀಡಿದ್ದೀರಿ. ಅದು ಅರ್ಧದಲ್ಲೇ ನಿಂತಿರುತ್ತದೆ. ಮತ್ತೊಮ್ಮೆ ನೀವು ಆಣೆ ಪ್ರಮಾಣ ಮಾಡುವುದಿದ್ದಲ್ಲಿ ಎರಡೂ ಕಡೆಯವರು ಬಂದು ನಿಮ್ಮ ಸ್ವ-ಇಚ್ಛೆಯಿಂದ ಮಾಡಬಹುದು ಎಂದು ತಿಳಿಸಿದ್ದಾರೆ. ಹೀಗಾಗಿ ನಾವು ಮಂಗಳವಾರ ಪ್ರಮಾಣ ಮಾಡಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ, ವಿಠ್ಠಲ ಗೌಡರವರು ನಾವು ಪ್ರಮಾಣ ಮಾಡಲು ಸಿದ್ಧ ಎಂದು ಮಾಧ್ಯಮದ ಎದುರು ಹೇಳಿದ್ದರು. ಅವರು ಕೂಡ ಧೈರ್ಯವಿದ್ದಲ್ಲಿ ಕೂಡಲೇ ಕಾನತ್ತೂರಿಗೆ ತೆರಳಿ ಆಣೆ ಪ್ರಮಾಣ ಮಾಡಲಿ, ಬೇಕಿದ್ದರೆ ನಮಗೆ
ಮುಂಚಿತವಾಗಿ ತಿಳಿಸಿದ್ದಲ್ಲಿ ಅವರ ಸಮಕ್ಷಮದಲ್ಲಿ ಎದುರು ಬದುರು ನಿಂತು ಮತ್ತೊಮ್ಮೆ ಪ್ರಮಾಣ ಮಾಡಲು ನಾವೂ ಸಿದ್ಧರಿದ್ದೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ ಎಂದು ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ತಿಳಿಸಿದ್ದಾರೆ.