ನ್ಯೂಸ್ ನಾಟೌಟ್ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಧರ್ಮಸ್ಥಳದ(Dharmastala) ಸಮೀಪ ಭೀಕರ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗಿದ್ದ ಸೌಜನ್ಯ(Soujanya Case) ಹತ್ಯೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ಮರುಜೀವ ಬಂದಿದೆ. ಸಿಬಿಐ ವಿಶೇಷ ಕೋರ್ಟ್(CBI Special Court) ನಲ್ಲಿ ಸಂತೋಷ್ ರಾವ್ (SantoshRao)ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಎದ್ದಿದೆ.ಈ ಕುರಿತಂತೆ ಅಲ್ಲಲ್ಲಿ ಪ್ರತಿಭಟನೆಗಳು(Protest) ಕೂಡ ನಡೆಯುತ್ತಿವೆ.ಇದೀಗ ಸುಳ್ಯದಲ್ಲಿಯೂ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಪತ್ರಿಕಾಗೋಷ್ಟಿ(Pressmeet) ನಡೆಯಿತು.
ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಈ ಕುರಿತು ಪ್ರತಿಕ್ರಿಯಿಸಿ “ಬೆಳ್ತಂಗಡಿಯಲ್ಲಾದ ಸೌಜನ್ಯ ಹತ್ಯೆ ಪ್ರಕರಣವನ್ನು ನಾವು ಖಂಡಿಸುತ್ತೇವೆ.ಈ ಕೃತ್ಯದ ಹಿಂದೆ ಯಾರೇ ಇದ್ದರೂ ಕಾನೂನಾತ್ಮಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಆರೋಪಿಗಳನ್ನು ಮಂಜುನಾಥ ಸ್ವಾಮಿ ಕಣ್ಣೆದುರೇ ತೋರಿಸಲಿ ಎಂದಿದ್ದಾರೆ.ನಂತರ ಮಾತನಾಡುತ್ತಾ” ಈ ವಿಚಾರದಲ್ಲಿ ವಿನಾ ಕಾರಣ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹೆಗ್ಗಡೆಯವರ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ನಾವೆಂದು ಸಹಿಸಲಾರೆವು.ಒಂದು ವೇಳೆ ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದೆ.
ಧರ್ಮಸ್ಥಳ ಕರ್ನಾಟಕದಲ್ಲೇ ಪ್ರಸಿದ್ಧ ಪುಣ್ಯ ಕ್ಷೇತ್ರವೆಂದೇ ಹೆಸರು ಗಳಿಸಿದೆ.ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಬಂದು ಕಷ್ಟ ಕಾರ್ಪಣ್ಯಗಳನ್ನು ಹೇಳಿ ಮಂಜುನಾಥನ ಮೊರೆ ಹೋಗುತ್ತಾರೆ.ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.ಇಂತಹ ಪುಣ್ಯ ನೆಲದಲ್ಲಿ ಧರ್ಮಾಧಿಕಾರಿಗಳಾದ ಪೂಜನೀಯ ಡಾ.ವೀರೆಂದ್ರ ಹೆಗ್ಗಡೆಯವರು ನಡೆದಾಡುವ ಮಂಜುನಾಥ ಸ್ವಾಮಿ ಎಂದೇ ಭಕ್ತರು ನಂಬಿದ್ದಾರೆ. ಆದರೆ ಈ ಕ್ಷೇತ್ರಕ್ಕೆ ಕಪ್ಪು ಮಸಿ ಬಳಿಯುವ ಕೆಲಸಗಳಾಗುತ್ತಿವೆ ಇದು ಖಂಡನೀಯ.ಲಕ್ಷಾಂತರ ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಧರ್ಮಸ್ಥಳ ಕ್ಷೇತ್ರಕ್ಕೆ ಇಂದು ಕಾಣದ ದುಷ್ಟ ಶಕ್ತಿಗಳು ಅಪಪ್ರಚಾರ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಇದನ್ನು ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಯತೀಶ್ ರೈ ದುಗಲಡ್ಕ ಹೇಳಿದರು.
ಈ ಪ್ರಕರಣದಲ್ಲಿ ಸುಖಾ ಸುಮ್ಮನೆ ಸುಳ್ಳಿನ ಕತೆಯನ್ನು ಕಟ್ಟಿಕೊಂಡು ವೈಯುಕ್ತಿಕವಾಗಿ ತಾನು ನಾಯಕನಾಗಿ ಮೆರೆಯಬೇಕೆಂಬ ಕಾರಣಕ್ಕಾಗಿ ಕ್ಷೇತ್ರದ ಬಗ್ಗೆ ಮತ್ತು ಪೂಜ್ಯರ ಮೇಲೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ಪೂಜ್ಯರ ಘನತೆ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ.ಇಂತಹ ಹೀನಾಯ ಮನಸ್ಥಿತಿಯುಳ್ಳ ವ್ಯಕ್ತಿಗಳು ಇನ್ನಾದರೂ ಮುಗ್ಧ ಮನಸ್ಸಿನ ಭಕ್ತರನ್ನು ಹಾದಿ ತಪ್ಪಿಸುವ ಕಾರ್ಯ ತಂತ್ರ ನಿಲ್ಲಿಸಬೇಕು ಎಂದು ಹೇಳಿದರು. ಧರ್ಮದ ಉಳಿವಿಗಾಗಿ ಸಾಮಾನ್ಯ ಜನರ ಸ್ವಾಭಿಮಾನದ ಬದುಕಿಗಾಗಿ ದುಷ್ಟ ಮುಕ್ತ ಸದೃಢ ಸಮಾಜದ ನಿರ್ಮಾಣಕ್ಕಾಗಿ ಮುಂದಿನ ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿಗಳ ಅರಿವಿನ ಅಗತ್ಯವಿದೆ. ಇಡೀ ರಾಜ್ಯದಲ್ಲಿ ಅದೆಷ್ಟೋ ದೇವಸ್ಥಾನದ ಭಜನಾ ಮಂದಿರ ಶ್ರದ್ಧಾಕೇಂದ್ರ ಗಳ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟ ಧರ್ಮದ ರಕ್ಷಣೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡಿರುವ ಪೂಜ್ಯ ಧರ್ಮಾಧಿಕಾರಿಯವರ ವಿರುದ್ಧ ಅವಹೇಳನಕಾರಿ ಮಾತನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದರು.
ಅಮಾಯಕ ಹೆಣ್ಣು ಮಗಳು ಸೌಜನ್ಯ ಹತ್ಯೆಯಾಗಿರುವುದನ್ನು ನಾವು ಕೂಡ ಸಹಿಸುವುದಿಲ್ಲ.ಕೃತ್ಯದ ಹಿಂದೆ ಯಾರಿದ್ದಾರೋ ತನಿಖೆ ಮಾಡಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆನ್ನುವುದೇ ನಮ್ಮ ಉದ್ದೇಶ.ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ನ್ಯಾಯಯುತವಾದ ಹೋರಾಟ ನಡೆಯಬೇಕು. ಇದನ್ನು ನಾವು ಬೆಂಬಲಿಸಲು ಸಿದ್ಧರಾಗಿದ್ದೇವೆ. ಅದು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಪರ ಕಾರ್ಯಗಳು ಹಾಗೂ ಖಾವಂದರ ಸಮಾಜಮುಖಿ ಕಾರ್ಯ ಚಿಂತನೆಗಳ ವೈಖರಿಯನ್ನು ಕಂಡು ಸಹಿಸದ ನೀಚ ವ್ಯಕ್ತಿಗಳು ಪರಮ ಪೂಜ್ಯ ಖಾವಂದರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಇದನ್ನು ನಾವು ಖಂಡಿತ ಸಹಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸೌಜನ್ಯ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ.ಆದರೆ ಕ್ಷೇತ್ರ ಹಾಗೂ ಪೂಜ್ಯರ ಬಗ್ಗೆ ಅವಮಾನಿಸಿರುವ ವ್ಯಕ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷೇತ್ರ ಹಾಗೂ ಖಾವಂದರ ಕ್ಷಮೆ ಯಾಚಿಸಬೇಕು.
ಈ ವೇಳೆ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ, ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಕಾರ್ಯದರ್ಶಿ ಸತೀಶ್ ಟಿ.ಎನ್ ಕಲ್ಮಕ್ಕಾರ್,ದೊಡ್ಡತೋಟ ವಲಯ ಅಧ್ಯಕ್ಷ ವೆಂಕಟ್ರಮಣ ಡಿ.ಜಿ ಜತೆಗಿದ್ದರು.
ವಿಡಿಯೋ ವೀಕ್ಷಿಸಿ👇