ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಪ್ರಿಯತಮನನ್ನು ಹುಡುಕುತ್ತಾ ಪಾಕಿಸ್ತಾನದ ಮಹಿಳೆಯೊಬ್ಬಳು ತನ್ನ ೪ ಮಕ್ಕಳೊಂದಿಗೆ ಬಂದಿರುವ ವಿಚಾರ ಭಾರಿ ವೈರಲ್ ಆಗಿತ್ತು.ಈಕೆ ಗೂಢಚಾರಿಯೇ ಎನ್ನುವ ಬಗ್ಗೆ ಹಲವರು ಅನುಮಾನ ವ್ಯಕ್ತ ಪಡಿಸಿರುವ ಬೆನ್ನಲ್ಲೇ ಇದೀಗ ಸೀಮಾ ಹೈದರ್ ಬಗೆಗಿನ ಮತ್ತಷ್ಟು ಸ್ಪೋಟಕ ವಿಚಾರಗಳು ಬಹಿರಂಗಗೊಳ್ಳುತ್ತಿವೆ.
ಇದೀಗ ಪಬ್ಜೀ (PUBG) ಮೂಲಕ ಸಚಿನ್ ಜೊತೆಗೆ ಮಾತ್ರವಲ್ಲ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಅನ್ನೋ ಸ್ಫೋಟಕ ಸಂಗತಿ ವಿಚಾರಣೆ ವೇಳೆ ಬಯಲಾಗಿದೆ. ಸೀಮಾ ದೆಹಲಿ ಎನ್ಸಿಆರ್ (Delhi NCR) ಪ್ರದೇಶದ ಹಲವರನ್ನ ಪಬ್ಜೀ ಮೂಲಕ ಸಂಪರ್ಕಿಸಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಆಕೆಯನ್ನು ಎಲ್ಲ ಆಯಾಮಗಳಲ್ಲೂ ವಿಚಾರಣೆಗೊಳಪಡಿಸಲಾಗಿದೆ.
ಈ ಬಗ್ಗೆ ವಿಚಾರಣೆ ಮುಂದುವರಿಸಿರುವ ನೋಯ್ಡಾ ಪೊಲೀಸರು ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆಯ ಎಲ್ಲಾ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗೆ ಈ ದಾಖಲೆಗಳನ್ನು ಪರಿಶೀಲನೆಗಾಗಿ ಕಳುಹಿಸಿದ್ದಾರೆ.ಸದ್ಯ ಈ ಒಂದು ಪ್ರಕರಣ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.ಈಕೆ ನಿಜವಾಗಿಯೂ ಸಚಿನ್ ಮೇಲೆ ಒಲವಿತ್ತು ಅನ್ನೋ ಕಾರಣಕ್ಕೆ ಭಾರತ ಪ್ರವೇಶಿಸಿದ್ದಾಳೋ ಅಥವಾ ಈಕೆಯ ಭಾರತದ ಎಂಟ್ರಿಗೆ ಬೇರೆನಾದರೂ ಕಾರಣಗಳಿವೆಯೋ ಎಂಬುದರ ಬಗ್ಗೆ ಚರ್ಚೆಗಳು ನಡಿತಿವೆ. ಮಾತ್ರವಲ್ಲ ಈ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ.
ಮೇ ತಿಂಗಳಲ್ಲಿ ಪ್ರೇಮಿ ಸಚಿನ್ ಮೀನಾ ಜೊತೆ ನೆಲೆಸಲು ನೇಪಾಳ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ತೀವ್ರ ನಿಗಾ ವಹಿಸಿದ್ದು,ಹಲವು ಆಯಾಮಗಳಲ್ಲಿ ವಿಚಾರಣೆಯನ್ನು ನಡೆಸುತ್ತಿವೆ.ಸೀಮಾಳ ಪಾಸ್ಪೋರ್ಸ್, ಪಾಕಿಸ್ತಾನಿ ಗುರುತಿನ ಚೀಟಿ ಹಾಗೂ ಮಕ್ಕಳ ಪಾಸ್ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನ ಪೊಲೀಸರು ತನಿಖೆ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ.
ಆಕೆಯ ಗುರುತು ಪರಿಶೀಲನೆಗಾಗಿ ಪಾಕಿಸ್ತಾನ ರಾಯಭಾರಿ ಕಚೇರಿಗೆ ಕಳುಹಿಸಿದ್ದಾರೆ. ಅಲ್ಲಿಂದ ವರದಿ ಬರುವವರೆಗೆ ತನಿಖೆ ಮುಂದುವರಿಯಲಿದೆ. ಆರೋಪಗಳು ದೃಢಪಟ್ಟ ನಂತರ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಸೀಮಾ ಹೈದರ್ ತನ್ನ ಮೊಬೈಲ್ ಡೇಟಾವನ್ನು ಡಿಲೀಟ್ ಮಾಡಿರುವ ಶಂಕೆ ಹಿನ್ನೆಲೆ ಮೋಬೈಲ್ ಅನ್ನು ಗಾಜಿಯಾಬಾದ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಆದ್ರೆ ಸೀಮಾ ಹೈದರ್ ತನ್ನ ಯಾವುದೇ ಡೇಟಾವನ್ನ ಅಳಿಸಿಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ.