ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕಿರುಚಾಡುತ್ತಾ, ವಿಚಿತ್ರವಾಗಿ ವರ್ತನೆ ತೋರಿದ ಘಟನೆ ಉತ್ತರಾಖಂಡ ರಾಜ್ಯದ ಶಾಲೆ ಒಂದರಲ್ಲಿ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಘಟನೆಗೆ ದೆವ್ವಗಳೇ ಕಾರಣ ಎಂಬ ಊಹಾಪೋಹಗಳು ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ.
ಉತ್ತರಾಖಂಡ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಶಾಲೆ ಮತ್ತು ಕಾಲೇಜುಗಳಿಗೆ ಬೀಗ ಹಾಕಿ, ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿತ್ತು. ಆದ್ರೆ ಪ್ರವಾಹ ಇಳಿಕೆಯಾದ ಬಳಿಕ ವಿದ್ಯಾರ್ಥಿಗಳು ಎಂದಿನಂತೆ ಮತ್ತೆ ಶಾಲೆಗೆ ಮರಳಿದ್ದರು. ಹೀಗೆ ಶಾಲೆಗೆ ಮರಳಿದ ವಿದ್ಯಾರ್ಥಿನಿಯರು, ಶಾಲೆಯ ಕಟ್ಟಡವನ್ನ ಪ್ರವೇಶಿಸುತ್ತಿದ್ದಂತೆ ವಿಚಿತ್ರವಾಗಿ ವರ್ತಿಸಿದ್ದಾರೆ.
ಹತ್ತಾರು ವಿದ್ಯಾರ್ಥಿನಿಯರು ದಿಢೀರ್ ಹೀಗೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನ ನೋಡಿ, ಚಂಪಾವತಿ ಜಿಲ್ಲೆಯ ಬಾಗೇಶ್ವರ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೆ ಆ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೇಲ್ನೋಟಕ್ಕೆ ಘಟನೆಗೆ ಮಾನಸಿಕ ರೋಗ ಕಾರಣ ಎಂಬ ಮಾತನ್ನು ತಜ್ಞರು ಹೇಳುತ್ತಿದ್ದು, ಆದ್ರೆ ಈ ಮಾತನ್ನ ನಂಬಲು ಬಾಗೇಶ್ವರ ಗ್ರಾಮಸ್ಥರು ಸಿದ್ಧವಾಗಿಲ್ಲ.
ಹೀಗಾಗಿ ನಾನಾ ರೀತಿ ಊಹಾಪೋಹ ಹುಟ್ಟಿಕೊಂಡಿದ್ದು, ಅದರಲ್ಲೂ ದೇವರ ಶಾಪದಿಂದ ಹೀಗೆ ಆಗಿದೆ, ದೆವ್ವಗಳ ಕಾಟ ಇರಬಹುದು ಅನ್ನೋ ವಾದಗಳು ಹರಿದಾಡುತ್ತಿವೆ. ಸ್ಥಳೀಯ ಆಡಳಿತ ಮತ್ತು ಶಿಕ್ಷಣ ಇಲಾಖೆ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದೆ. ಹಲವು ವಿದ್ಯಾರ್ಥಿನಿಯರು ಹೀಗೆ ವಿಚಿತ್ರವಾಗಿ ವರ್ತಿಸಿದ್ದನ್ನು ನೋಡಿದ ಇತರ ವಿದ್ಯಾರ್ಥಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಈ ಕಾರಣಕ್ಕೆ ಮಕ್ಕಳು ಶಾಲೆಗೆ ಗೈರುಹಾಜರಾಗುವ ಭಯ ಹೆಚ್ಚಾಗಿದೆ.