ನ್ಯೂಸ್ ನಾಟೌಟ್ : ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಹೆಚ್ಚಿನವರು ಅವರ ಸ್ಟೈಲ್, ಆ್ಯಕ್ಟಿಂಗ್ ಮತ್ತು ಹಲವು ಜೀವನ ಕ್ರಮಗಳನ್ನು ಆದರ್ಶವಾಗಿರಿಸಿಕೊಂಡು ಪಾಲಿಸುವವರಿದ್ದಾರೆ. ಹಾಗೆಯೇ ಇಲ್ಲೊಂದು ಘಟನೆ ವೈರಲ್ ಆಗಿದ್ದು, ಈ ಘಟನೆ ಬಾಗಲಕೋಟೆಯ ಕುಲಹಳ್ಳಿಯಲ್ಲಿ ನಡೆದಿದೆ.
2017ರಲ್ಲಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ಕಿಚ್ಚನ ಹೇರ್ ಸ್ಟೈಲ್ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದರು. ಅಂದಿನಿಂದ ‘ಹೆಬ್ಬುಲಿ’ ಸಿನಿಮಾದ ಕಿಚ್ಚನ ಹೇರ್ ಸ್ಟೈಲ್ ‘ಹೆಬ್ಬುಲಿ ಹೇರ್ ಕಟ್’ ಅಂತಲೇ ಫೇಮಸ್ ಆಯ್ತು.
ಈ ಸಿನಿಮಾ ರಿಲೀಸ್ ಆಗಿ ಆರು ವರ್ಷಗಳಾಗಿದ್ದರೂ, ಹೆಬ್ಬುಲಿ ಹೇರ್ ಸ್ಟೈಲ್ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಇಂದಿಗೂ ಮಕ್ಕಳ ಫೇವರಿಟ್ ಹೇರ್ಸ್ಟೈಲ್ ಇದು. ಆದರೆ, ಇದೇ ವಿಚಾರವಾಗಿ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಸಲೂನ್ ಮಾಲೀಕನಿಗೆ ಈ ಹೇರ್ ಸ್ಟೈಲ್ ಮಾಡದೇ ಇರುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಆ ಪತ್ರವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
“ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯ ಗಂಡು ಮಕ್ಕಳು ‘ಹೆಬ್ಬುಲಿ’ಯಂತಹ ಇತರೆ ತರಹದ ಹೇರ್ ಕಟ್ಟಿಂಗ್ (ತಲೆಯ ಒಂದು ಬದಿಗೆ ಕೂದಲು ಬಿಟ್ಟು, ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು) ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೆ ಹಾಗೂ ಶೈಕ್ಷಣಿಕ ಚುಟುವಟಿಗೆಗಳಿಗೆ ಹೆಚ್ಚು ಮಹತ್ವ ನೀಡದೆ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟ್ಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಒಂದು ವೇಳೆ ವಿದ್ಯಾರ್ಥಿಗಳು ಹೆಬ್ಬುಲಿ ಹೇರ್ ಕಟ್ಟಿಂಗ್ ಮಾಡಲು ನಿಮಗೆ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಅವರ ಪಾಲಕರ ಗಮನಕ್ಕೆ ತರಲು ತಮ್ಮಲ್ಲಿ ಕೋರುತ್ತೇನೆ.” ಎಂದು ಹೆಡ್ ಮಾಸ್ಟರ್ ಶಿವಾಜಿ ನಾಯಕ ಪತ್ರ ಬರೆದಿದ್ದಾರೆ.
ಪ್ರತಿ ಶೈಕ್ಷಣಿಕ ವರ್ಷದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಫಲಿತಾಂಶ ಚೆನ್ನಾಗಿದೆ. ಓದಿನಲ್ಲಿ ಹೆಣ್ಣು ಮಕ್ಕಳು ಮುಂದಿದ್ದಾರೆ. ಹೀಗಾಗಿ ಶಾಲಾ ಸಿಬ್ಬಂದಿ ಹಾಗೂ ಪೋಷಕರು ಈ ವಿಚಾರವಾಗಿ ಚರ್ಚೆ ಮಾಡಿದ್ದು, ಗಂಡು ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗದೆ, ಹೇರ್ ಸ್ಟೈಲ್, ಡ್ರೆಸ್ ಬಗ್ಗೆನೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಕಾರಣದಿಂದ ಶಾಲೆಯಲ್ಲಿ ಒಂದೇ ರೀತಿಯ ಹೇರ್ ಕಟ್ ಇರಬೇಕು ಎಂಬುದು ಒಮ್ಮತದ ನಿರ್ಧಾರವಾಗಿತ್ತು. ಈ ಕಾರಣಕ್ಕೆ ಸಲೂನ್ ಮಾಲೀಕರಿಗೆ ಹೆಡ್ ಮಾಸ್ಟರ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ.