ನ್ಯೂಸ್ ನಾಟೌಟ್: ಸಂಪಾಜೆ ಚೆಕ್ಪೋಸ್ಟ್ ಬಳಿ ಚಲಿಸುತ್ತಿದ್ದ ಕಾರ್ನಿಂದ ಕೆಳಕ್ಕೆ ಬಿದ್ದಿದ್ದ ಕಾಲೇಜು ವಿದ್ಯಾರ್ಥಿನಿಯ ಬ್ಯಾಗ್ ಅನ್ನು ಮೈಸೂರಿನಿಂದ ಸಂಪಾಜೆಗೆ ವಾಪಸ್ ಬಂದು ಪೋಷಕರು ಪಡೆದುಕೊಂಡಿದ್ದಾರೆ.
ಜುಲೈ 8 ರಂದು ಚಲಿಸುತ್ತಿದ್ದ ಕಾರಿನಿಂದ ಕೊಡಗು ಸಂಪಾಜೆಯ ಚೆಕ್ಪೋಸ್ಟ್ ಬಳಿ ಕಾಲೇಜು ವಿದ್ಯಾರ್ಥಿನಿಯ ಬ್ಯಾಗ್ವೊಂದು ರಸ್ತೆಗೆ ಬಿದ್ದಿತ್ತು. ಇದನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕ ಧನಂಜಯ ಅನ್ನುವವರು ತೆಗೆದು ನೋಡಿದಾಗ ಬ್ಯಾಗ್ ಒಳಗೆ ಹಣ, ಹೊಸ ಬಟ್ಟೆ, ಕಾಲೇಜು ಪುಸ್ತಕಗಳು ಇದ್ದವು. ಬ್ಯಾಗ್ ಬಿದ್ದು ಸಿಕ್ಕಿರುವ ವಿಚಾರವನ್ನು ತಕ್ಷಣ ನ್ಯೂಸ್ ನಾಟೌಟ್ ಚಾನೆಲ್ಗೆ ಕರೆ ಮಾಡಿ ಧನಂಜಯರು ತಿಳಿಸಿದ್ದರು. ಧನಂಜಯ್ ಅವರ ಮಾಹಿತಿ ಆಧರಿಸಿ ನ್ಯೂಸ್ ನಾಟೌಟ್ ವರದಿಯನ್ನೂ ಪ್ರಕಟಿಸಿತು. ಮಾತ್ರವಲ್ಲ ಮೈಸೂರಿನ ಪತ್ರಕರ್ತರಾದ ದಿನೇಶ್ ಹಾಗೂ ಮಹಾದೇವಸ್ವಾಮಿಯವರನ್ನು ಸಂಪರ್ಕಿಸಿ ರಮ್ಯ ಹೆಸರಿನ SBRR ಮಹಾಜನ ಪ್ರಥಮ ದರ್ಜೆ ಕಾಲೇಜು ಮೈಸೂರು ಇದರ BBA (ಹೋಟೆಲ್ ಮತ್ತು ಹಾಸ್ಪಿಟಾಲಿಟಿ) ಆರನೇ ಸೆಮಿಸ್ಟರ್ ವಿದ್ಯಾರ್ಥಿನಿಯ ಬ್ಯಾಗ್ ಸಿಕ್ಕಿರುವುದರ ಬಗ್ಗೆ ತಿಳಿಸಲಾಗಿತ್ತು.
ಈ ಪ್ರಕಾರವಾಗಿ ನ್ಯೂಸ್ ನಾಟೌಟ್ ವರದಿಯನ್ನು ಅವರು ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿಕೊಟ್ಟಿದ್ದಾರೆ. ಅವರು ಪೋಷಕರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಿದ್ದಾರೆ. ಅದರಂತೆ ರಮ್ಯ ಅವರ ತಂದೆ ಚಂದ್ರಶೇಖರ್ ಅವರು ಸಂಪಾಜೆಗೆ ಬಂದು ಧನಂಜಯ ಅವರನ್ನು ಸಂಪರ್ಕಿಸಿ ಬ್ಯಾಗ್ ಅನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಬ್ಯಾಗ್ ಅನ್ನು ಸುರಕ್ಷಿತವಾಗಿ ಕೊಟ್ಟ ಧನಂಜಯ್ ಅವರಿಗೆ ಹಾಗೂ ವರದಿ ಪ್ರಕಟಿಸಿ ಸುದ್ದಿ ತಿಳಿಯುವಂತೆ ಮಾಡಿದ ನ್ಯೂಸ್ ನಾಟೌಟ್ ಗೆ ಚಂದ್ರಶೇಖರ್ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.