ನ್ಯೂಸ್ ನಾಟೌಟ್: ಸಂಪಾಜೆ ಮಾರ್ಗವಾಗಿ ಮಡಿಕೇರಿಗೆ ಸಾಗುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಸದ್ಯ ಮುಖ್ಯ ರಸ್ತೆಯ ಬಳಿ ಪರ್ಯಾಯ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ತಾತ್ಕಾಲಿಕ ಅವಕಾಶವನ್ನು ಒದಗಿಸಲಾಗಿದೆ. ಸದ್ಯ ಮಡಿಕೇರಿ ಹಾಗೂ ಸಂಪಾಜೆ ಘಾಟಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕುಸಿತದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆಯು ಯೆಲ್ಲೋ ಆಲರ್ಟ್ ಘೋಷಣೆ ಮಾಡಿದೆ. ಮಡಿಕೇರಿ, ನಾಪೋಕ್ಲು, ಗಾಳಿಬೀಡು, ವಿರಾಜಪೇಟೆ ಸೇರಿದಂತೆ ವಿವಿಧ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೊಡಗಿನ ಹಲವು ಭಾಗಗಳಲ್ಲಿ ಮಳೆ ಜೊತೆಗೆ ಗಾಳಿಯೂ ಹೆಚ್ಚಾಗಿದೆ.
ಮರಗಳು ಧರೆಗುರುಳಿವೆ. ಬೋಹಿಕೇರಿ ಮತ್ತು ಕುಶಾಲನಗರಕ್ಕೆ ತೆರಳುವ ರಸ್ತೆಯಲ್ಲಿ ಮರ ಬಿದ್ದಿದ್ದು ಕೆಲಕಾಲ ರಸ್ತೆ ಸಂಚಾರವೇ ಬಂದ್ ಆಗಿತ್ತು. ಬಳಿಕ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಸಮಸ್ಯೆ ಎದುರಾಗುತ್ತಿದೆ.