ನ್ಯೂಸ್ ನಾಟೌಟ್: ಪುತ್ತೂರು ತಾಲೂಕಿನ ಕೊಯಿಲಾ ಗ್ರಾಮದಲ್ಲಿ ಪಾಳು ಬಿದ್ದಿರುವ 680 ಎಕರೆ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗ ಶೀಘ್ರದಲ್ಲೇ ಸದ್ಬಳಕೆಯಾಗಲಿದೆ.
ಪಿ.ಪಿ.ಪಿ. ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪೌಲ್ಟ್ರಿಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅವಕಾಶ ಕಲ್ಪಿಸುವಂತೆ ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಸೋಮವಾರ (ಜು.3) ಮನವಿ ಮಾಡಿದ್ದಾರೆ.
ಈ ಬಗ್ಗೆ ಕಳೆದ ತಿಂಗಳು ಪ್ರಸ್ತಾಪ ಸಲ್ಲಿಸಿದ್ದ ಶಾಸಕರು ಎರಡನೇ ಬಾರಿಗೆ ಮತ್ತೊಮ್ಮೆ ಖುದ್ದಾಗಿ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಕೊಯಿಲಾ ಗ್ರಾಮದ 260 ಎಕರೆ ಜಾಗವನ್ನು ಈಗಾಗಲೇ ಪಶು ವೈದ್ಯಕೀಯ ಕಾಲೇಜಿಗೆ ಮೀಸಲಿಟ್ಟಿದ್ದು, ಇದೇ ಪರಿಸರದಲ್ಲಿ ಪಶು ಸಂಗೋಪನೆ ಇಲಾಖೆಗೆ ಸೇರಿದ ಸುಮಾರು 680 ಎಕರೆ ಜಾಗ ಯಾವುದೇ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿರುತ್ತದೆ. ಈ ಜಾಗದ ಸದ್ಬಳಕೆಗೆ ಕೂಡಲೇ ನೋಡಲ್ ಅಧಿಕಾರಿಯನ್ನು ನೇಮಿಸಿ, ಪ್ರಕ್ರಿಯೆ ಪ್ರಾರಂಭಿಸಿದಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಹೆಚ್ಚಿನ ಖಾಸಗಿ ಸಂಸ್ಥೆಗಳು ಆಸಕ್ತರಾಗಿರುತ್ತಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ ಪಿ.ಪಿ.ಪಿ. ಮಾದರಿಯಿಂದ ಸರ್ಕಾರಕ್ಕೆ ಕಂದಾಯವು ಸಹ ಸಂಗ್ರಹಣೆಯಾಗುತ್ತದೆ ಎಂದು ಸಚಿವ ಕೆ. ವೆಂಕಟೇಶ್ ಅವರಿಗೆ ಮನವರಿಕೆ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಕೊಯಿಲಾ ಫಾರಂನಲ್ಲಿ ಪಾಳುಬಿದ್ದಿರುವ 680 ಎಕ್ರೆ ಜಾಗದಲ್ಲಿ ಖಾಸಗಿ ಸಂಸ್ಥೆಯವರು ಗುತ್ತಿಗೆ ಆಧಾರದಲ್ಲಿ ಉದ್ಯಮ ಆರಂಭಿಸಿದರೆ ನೂರಾರು ಮಂದಿಗೆ ಉದ್ಯೋಗ ದೊರೆಯಲಿದೆ. ಸ್ಥಳೀಯರಿಗೆ ಕ್ಷೇತ್ರದಲ್ಲೇ ಉದ್ಯೋಗ ಸಿಗಬೇಕು. ಜತೆಗೆ ಉದ್ಯಮದಿಂದ ಸರ್ಕಾರಕ್ಕೆ ಆರ್ಥಿಕವಾಗಿ ಲಾಭವಾಗಲಿದ್ದು, ಕೊಯಿಲಾ ಗ್ರಾಮವೂ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.