ನ್ಯೂಸ್ ನಾಟೌಟ್ : ಕುಲಾಲ ಸಂಘ ನಂಬಿಕೆ, ವಿಶ್ವಾಸ ದ್ರೋಹ, ದಬ್ಬಾಳಿಕೆ ಮಾಡದ ಸಮಾಜವಾಗಿದೆ. ಹಿರಿಯರು ಸಮಾಜಕ್ಕೆ ಸಲ್ಲಿಸಿದ ಸೇವೆ, ಅಭಿವೃದ್ಧಿ ಕಾರ್ಯಗಳಿಂದ ಪ್ರೇರಣೆಗೊಂಡು ಮುಂದಿನ ಪೀಳಿಗೆ ಮತ್ತಷ್ಟು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಹೇಳಿದರು.
ಪುತ್ತೂರು ಕುಲಾಲ ಸಮಾಜಸೇವಾ ಸಂಘದ ವತಿಯಿಂದ ಭಾನುವಾರ ನಗರದ ಪುರಭವನದಲ್ಲಿ ಆಯೋಜಿಸಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಶಸ್ತಿ ಪ್ರದಾನ ಸಮಾರಂಭ, ವಿದ್ಯಾರ್ಥಿವೇತನ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಮಾಜ ಬೆಳೆಯಬೇಕಾದರೆ ಸಮಾಜದಲ್ಲಿ ಒಗ್ಗಟ್ಟು ಮುಖ್ಯ. ಈ ನಿಟ್ಟಿನಲ್ಲಿ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಮಾಡಿ. ಸಮಾಜದ ಹಿಂದೆ ನಮ್ಮ ಸಹಕಾರ ಸದಾ ಇದೆ ಎಂದರು.
ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಪ್ರಸ್ತುತ ಗೌರವಕ್ಕೆ ಪಾತ್ರವಾದ ಕುಲಾಲ ಸಮಾಜದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಬೇಕಾಗಿದೆ. ಇವೆಲ್ಲದಕ್ಕೆ ಇಂದು ಕುಲಾಲ ಸಮಾಜದ ವತಿಯಿಂದ ಮಂಗಳೂರಿನ ಕುಲಶೇಖರದಲ್ಲಿ ನಿರ್ಮಾಣಗೊಂಡ ಶ್ರೀ ವೀರನಾರಾಯಣ ದೇವಸ್ಥಾನ ಕಾರಣವಾಗಿದೆ. ಇದು ಸಮಾಜದ ನ್ಯೂನತೆಗೆ ಪರಿಹಾರ ಸೂಚಕವಾಗಿರಬೇಕು ಎಂದರು.
ಸಮಾರಂಭದಲ್ಲಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರಿಗೆ ಕುಲಾಲ ಕುಲತಿಲಕ ಪ್ರಶಸ್ತಿ ಹಾಗೂ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಅವರಿಗೆ ಕುಲಾಲ ಕುಲಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಗ್ನಿಶಾಮಕ ನಿವೃತ್ತ ಠಾಣಾಧಿಕಾರಿ ಎಂ.ಗೋಪಾಲ್ ದಂಪತಿಯನ್ನು ಸನ್ಮಾನಿಸಲಾಯಿತು. ‘ಬೊಲ್ಪು’ ಕಿರುಚಿತ್ರದ ಪೋಸ್ಟರನ್ನು ಚಲನಚಿತ್ರ ನಟ ಮನೋಜ್ ಕುಲಾಲ್ ಬಿಡುಗಡೆಗೊಳಿಸಿದರು. ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಮಧ್ಯಾಹ್ನದ ಬಳಿಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಪುತ್ತೂರು ಕುಲಾಲ ಸಮಾಜಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಹಿರಿಯರಾದ ಬಿ.ಎಸ್.ಕುಲಾಲ್, ಚಲನಚಿತ್ರ ನಟ ಮನೋಜ್ ಕುಲಾಲ್, ವಿಟ್ಲ ಸಂಘದ ಅಧ್ಯಕ್ಷ ಬಿ.ಕೆ.ಬಾಬು, ಬೆಳ್ಲಾರೆಯ ಶೈಲೇಶ್ ನೆಟ್ಟಾರು, ರಾಮಕುಂಜದ ಮೋನಪ್ಪ ಕುಲಾಲ್ ಬೊಳ್ಳರೋಡಿ, ಪಾಣಾಜೆಯ ದಿವಾಕರ ಕುಲಾಲ್, ಕೌಡಿಚ್ಚಾರಿನ ಬಾಲಕೃಷ್ಣ ಕೌಡಿಚ್ಚಾರ್, ಕೆಯ್ಯೂರಿನ ಹೊನ್ನಪ್ಪ ಮೂಲ್ಯ, ಆರ್ಯಾಪಿನ ಶೀನಪ್ಪ ಕುಂಬಾರ, ಸಂಘದ ಕಾರ್ಯದರ್ಶಿ ಜನಾರ್ದನ ಮೂಲ್ಯ ಸಾರ್ಯ, ಚಾರ್ವಾಕ ಕೊಪ್ಪ ಕೆಳಗಿನಕೇರಿ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರ ವಸಂತ ಕುಂಬಾರ ಉಪಸ್ಥಿತರಿದ್ದರು.