ನ್ಯೂಸ್ ನಾಟೌಟ್: ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಮೃತ ಯುವಕನನ್ನು ಪುಂಜಾಲಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಗಣೇಶ ಆಚಾರ್ಯ ಅವರ ಪುತ್ರ ರೂಪೇಶ್ ಆಚಾರ್ಯ (31) ಎಂದು ಗುರುತಿಸಲಾಗಿದೆ.
ರೂಪೇಶ್ ಅವರು ಸ್ವರ್ಣ ಕುಸುರಿ ಕೆಲಸಗಾರರಾಗಿದ್ದು, ಸ್ಥಳೀಯ ಸಂಸ್ಥೆಯಲ್ಲಿ ನೌಕರರಾಗಿದ್ದರು. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಅವರು ಮದ್ಯವ್ಯಸನಿಯಾಗಿದ್ದು, ಗುರುವಾರ ಕೊಠಡಿಯಲ್ಲಿ ಸೈನೇಡ್ ಸೇವಿಸಿದ್ದರು. ಇದನ್ನು ಗಮನಿಸಿದ ಮನೆ ಮಂದಿ ಮಧ್ಯಾಹ್ನ ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಣೇಶ ಆಚಾರ್ಯ ಅವರ ಮೂವರು ಪುತ್ರರಲ್ಲಿ ಹಿರಿಯವನಾಗಿದ್ದ ರೂಪೇಶ್ ವಿವಾಹಿತನಾಗಿದ್ದು, ಪತ್ನಿ, ಪುಟ್ಟ ಮಗುವನ್ನು ಅಗಲಿದ್ದಾರೆ.