ನ್ಯೂಸ್ ನಾಟೌಟ್: ಪ್ರವೀಣ್ ನೆಟ್ಟಾರ್ ಹಂತಕರಿಗಾಗಿ NIA ಎಲ್ಲೆಡೆ ಹುಡುಕಾಟ ನಡೆಸುತ್ತಿದೆ. ಮತ್ತೊಂದು ಕಡೆ ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಗಳು ಅರಬ್ ದೇಶಗಳಿಗೆ ಎಸ್ಕೇಪ್ ಆಗಿದ್ದಾರೆ ಅನ್ನುವ ಸುದ್ದಿ ಹೊರ ಬಿದ್ದಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೇಕಾಗಿರುವ ಇನ್ನೂ ನಾಲ್ವರು ಆರೋಪಿಗಳು NIA ಕಣ್ಣಿಗೆ ಮಣ್ಣೆರಚಿ ತಲೆ ಮರೆಸಿಕೊಂಡಿದ್ದಾರೆ. ಇವರೆಲ್ಲರ ತಲೆಗೆ ಒಟ್ಟು 14 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. NIA ಇತ್ತೀಚಿಗೆ ಮಂಗಳೂರು ಹಾಗೂ ಕೊಡಗಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿತ್ತು. ಶರಾಣಾಗತಿಯಾಗಲು ಆರೋಪಿಗಳಿಗೆ ಜೂ.30 ರ ಗಡುವು ನೀಡಿತ್ತು. ಇದೀಗ ಆಸ್ತಿ ಮುಟ್ಟುಗೋಲು ಹಾಕುವ ತಂತ್ರಕ್ಕೂ ಮಣಿಯದೆ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ ಅನ್ನುವ ಸುದ್ದಿಯನ್ನು ಸ್ವತಃ NIA ಉನ್ನತ ಮೂಲಗಳು ತಿಳಿಸಿವೆ.
ಉಮರ್ ಫಾರುಕ್, ಅಬುಬಕರ್ ಸಿದ್ದಿಕ್, ತುಫೈಲ್, ಮೊಹಮ್ಮದ್ ಮುಸ್ತಾಫಾ ಕೊಲೆ ಪ್ರಕರಣದಲ್ಲಿ ಎನ್ಐಎಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ಗಳಾಗಿದ್ದಾರೆ. ಕೊಡಗಿನ ತುಫೈಲ್ ಎಮ್.ಹೆಚ್ ಈ ನಾಲ್ವರಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ನಾಲ್ವರ ಪತ್ತೆಗೆ ಒಟ್ಟು 14 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಈ ಪೈಕಿ ತುಫೈಲ್, ಮೊಹಮ್ಮದ್ ಮುಸ್ತಾಫಾ ಸುಳಿವಿಗೆ ತಲಾ 5 ಲಕ್ಷ, ಉಮರ್ ಫಾರುಕ್, ಅಬುಬಕರ್ ಸಿದ್ದಿಕ್ ಪತ್ತೆಗೆ ತಲಾ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಕೊಡಗಿನಲ್ಲಿ ನಡೆದ ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತುಫೈಲ್ಗೆ ಉಗ್ರ ಸಂಘಟನೆಯ ಪ್ರಮುಖರ ನೇರ ಸಂಪರ್ಕ ಇದೆ. ಅಲ್ಲದೆ, ಜಿಲ್ಲೆಯ ಪಿಎಫ್ಐ ಅಸಾಲ್ಟ್ ತಂಡದಲ್ಲಿ ಈತ ಪ್ರಮುಖನಾಗಿದ್ದನು.
ಅಸಲಿಗೆ ಈ ನಾಲ್ವರು ಆರೋಪಿಗಳು ಭಾರತದಲ್ಲಿ ಇರುವುದೇ ಡೌಟ್. ಕೊಲೆಯ ತನಿಖೆ ಎನ್ಐಎ ಹೆಗಲಿಗೆ ಬೀಳುತ್ತಿದ್ದಂತೆ ಮಾಸ್ಟರ್ ಮೈಂಡ್ಗಳು ವಿದೇಶಕ್ಕೆ ಹಾರಿರುವ ಅನುಮಾನ ವ್ಯಕ್ತವಾಗಿದೆ. ಹೌದು, ನೇಪಾಳದ ಮೂಲಕ ದುಬೈ ಸೇರಿದಂತೆ ವಿವಿಧ ಅರಬ್ ರಾಷ್ಟ್ರಗಳಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ನೇಪಾಳದ ಜಾಡು ಹಿಡಿದು ಹೋಗಿದ್ದ ಎನ್ಐಎ ತಂಡದಿಂದ ಇಬ್ಬರು ಆರೋಪಿಗಳು ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದರು ಎಂದು ಎನ್ಐಎ ಮೂಲಗಳಿಂದ ತಿಳಿದುಬಂದಿದೆ.