ನ್ಯೂಸ್ ನಾಟೌಟ್ : ಪ್ರಯಾಣಿಕರೊಬ್ಬರು ರೈಲು ಪ್ರಯಾಣದ ವೇಳೆ ಇನ್ನೇನು ಹೊಟ್ಟೆ ತುಂಬಾ ತಿನ್ನೋಣ ಎಂದು ಹೊರಟಿದ್ದವರು ದಿಗ್ಭ್ರಮೆಗೊಳಗಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಹೌದು,ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಲಾದ ಚಪಾತಿ ಊಟದಲ್ಲಿ ಜಿರಳೆ (Cockroach) ಕಾಣಿಸಿಕೊಂಡಿದೆ.
ರಾಜಧಾನಿ ಭೋಪಾಲ್ನಿಂದ ಗ್ವಾಲಿಯರ್ಗೆ ಪ್ರಯಾಣಿಸುತ್ತಿದ್ದ ವೇಳೆ IRCTC ಕ್ಯಾಟರಿಂಗ್ ಸಿಬ್ಬಂದಿ ಬಡಿಸಿದ ಚಪಾತಿ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು ತಕ್ಷಣವೇ ಅದರ ಫೋಟೋ ಕ್ಲಿಕ್ಕಿಸಿದ್ದಾರೆ. ಬ್ಲಾಗರ್ ಸುಬೋಧ್ ಪಹಲಾಜನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತ ಫೋಟೋಗಳನ್ನ ಹಂಚಿಕೊಂಡಿದ್ದು ಭಾರೀ ವೈರಲಾಗುತ್ತಿದೆ.
ಟ್ವೀಟ್ ಮೂಲಕ ಶೇರ್ ಆದ ಫೋಟೋಗಳಲ್ಲಿ ಕೂಡ ಚಪಾತಿಗೆ ಸಣ್ಣ ಜಿರಳೆಯೊಂದು ಅಂಟಿಕೊಂಡಿರುವುದನ್ನ ಕಾಣಬಹುದಾಗಿದೆ.ಇದನ್ನ ಐಆರ್ಸಿಟಿಸಿ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದು, ವಂದೇ ಭಾರತ್ ರೈಲಿನಲ್ಲಿ ನನಗೆ ನೀಡಲಾದ ಆಹಾರದಲ್ಲಿ ಜಿರಳೆ ಕಂಡುಬಂದಿದೆ ಎಂದು ಬರೆದುಕೊಂಡಿದ್ದಾರೆ.ಮೂರ್ನಾಲ್ಕು ಫೋಟೋಗಳನ್ನು ಶೇರ್ ಮಾಡಿದ್ದು ಜಿರಳೆ ಇರೋದು ಸ್ಪಷ್ಟವಾಗಿ ಕಾಣುತ್ತಿದೆ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಐಆರ್ಸಿಟಿಸಿ, ಈ ಅಹಿತಕರ ಘಟನೆಗಾಗಿ ವಿಷಾದಿಸುತ್ತೇವೆ ಎಂದಿದೆ. ಪ್ರಯಾಣಿಕನ ಸಮಸ್ಯೆಗೆ ಸ್ಪಂದಿಸುತ್ತಾ ಮುಂದೆ ಅಂತಹ ಯಾವುದೇ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದೆ.ಐಆರ್ಸಿಟಿಸಿ ಸೂಕ್ತ ಸ್ಪಂದನೆ ನೀಡಿದ್ದಕ್ಕಾಗಿ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.