ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿವೆ. ಅಂತಹುದೇ ಒಂದು ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯ ಎಸಗಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತನನ್ನು ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಹಾಝಿಗಂಝ್ ಅಮ್ದಾಹರದ ನಿವಾಸಿ ಆರೋಪಿ ಮುಫೀಜುಲ್ ಶೇಖ್(೨೬) ಎಂದು ಗುರುತಿಸಲಾಗಿದೆ.
ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣವಾದ ಮಾತಾ ಕನ್ಷ್ಟ್ರೆಕ್ಷನ್ನಲ್ಲಿ ಕಾರ್ಮಿಕನಾಗಿರುವ ಈ ವಿಕೃತ ಮನಸ್ಸಿನ ಕಿರಾತಕ ಅಲ್ಲಿ ಕೆಲಸ ಮಾಡಿಕೊಂಡಿದ್ದ.
ಅದೇ ಮುರ್ಷಿದಾಬಾದ್ ಜಿಲ್ಲೆಯ ದಂಪತಿಯ ಐದು ವರ್ಷದ ಮಗಳನ್ನೇ ಮಧ್ಯಾಹ್ನದ ವೇಳೆ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿನ ತನ್ನ ರೂಮಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಬಾಲಕಿಯು ಹೊಟ್ಟೆ ನೋವೆನ್ನುತ್ತಲೇ ಕಾಲಲ್ಲಿ ರಕ್ತ ಒಸರುತ್ತಿದ್ದಾಗ ಆಕೆಯನ್ನು ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅಲ್ಲಿನ ವೈದ್ಯರು ಪರಿಶೀಲಿಸಿ ಲೈಂಗಿಕ ದೌರ್ಜನ್ಯ ನಡೆದಿರುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಬಾಲಕಿಯನ್ನು ಪಡುಬಿದ್ರಿ ಠಾಣಾ ಮಹಿಳಾ ಪೇದೆ, ಆಕೆಯ ತಂದೆ, ತಾಯಿ ಜತೆಗೆ ಉಡುಪಿಯ ಸರಕಾರಿ ಮಕ್ಕಳ ಆಸ್ಪತ್ರೆಗೆ ರವಾನಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಸಂಶಯವು ದೃಢಪಟ್ಟಿದೆ. ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾನೂನಿನಡಿ ಪ್ರಕರಣವನ್ನು ದಾಖಲಿಸಲಾಗಿದೆ. ಕಾಪು ವೃತ್ತ ನಿರೀಕ್ಷಕ ಪೂವಯ್ಯ ತನಿಖೆಯನ್ನು ನಡೆಸುತ್ತಿದ್ದಾರೆ.