ನ್ಯೂಸ್ ನಾಟೌಟ್: ಒಕ್ಕಲಿಗ ಸಮುದಾಯದ ಆರಾಧ್ಯ ಶಕ್ತಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠ ಈಗ ಅಮೆರಿಕದಲ್ಲಿಯೂ ಕಾರ್ಯಾರಂಭಗೊಳ್ಳುವುದಕ್ಕೆ ಸಿದ್ಧಗೊಂಡಿದೆ. ಮುಂದಿನ ದಿನಗಳಲ್ಲಿ ನಿತ್ಯ ಶ್ರೀ ಕಾಲಬೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸತ್ಸಂಗ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ದೇಶದ ವಿವಿಧ ಮಠಗಳು ಧಾರ್ಮಿಕ ಕೇಂದ್ರಗಳನ್ನು ವಿದೇಶದಲ್ಲಿ ಹೊಂದಿವೆ. ಅಂತಹ ಮಠಗಳ ಸಾಲಿಗೆ ಈಗ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನವೂ ಸೇರಿಕೊಂಡಿದೆ. ಅನೇಕ ಮಠಗಳ ಶಾಖೆಗಳು ವಿದೇಶದಲ್ಲಿ ಕಾರ್ಯಾಚರಿಸುತ್ತಿವೆ. ಭಾರತೀಯ ಸಂಸ್ಕೃತಿ, ಧಾರ್ಮಿಕ ಚಟುವಟಿಕೆಗಳ ಅಧ್ಯಯನದ ಕೇಂದ್ರವಾಗಿದೆ. ಇದೀಗ ಅಮೆರಿಕದ ನ್ಯೂಜೆರ್ಸಿಯಲ್ಲಿ ಶ್ರೀ ಆದಿಚುಂಚನಗಿರಿ ಕಲ್ಚುರಲ್ ಅಂಡ್ ಸ್ಪಿರಿಚುವಲ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿದೆ.
ಶ್ರೀ ಆದಿಚುಂಚನಗಿರಿ ಕಲ್ಚುರಲ್ ಅಂಡ್ ಸ್ಪಿರಿಚುವಲ್ ಫೌಂಡೇಷನ್ ಶಾಖಾ ಮಠವನ್ನು ಅಮೆರಿಕದಲ್ಲಿ ಇರುವ ನಿಯಮಾವಳಿಯ ಪ್ರಕಾರವಾಗಿ ನಿರ್ಮಿಸಲಾಗಿದ್ದು ಅತ್ಯಾಕರ್ಷಕವಾಗಿದೆ. ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಭೈರವೈಕ್ಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳು ಅಮೆರಿಕದಲ್ಲಿ ಶಾಖಾ ಮಠ ಹೊಂದಬೇಕು ಅನ್ನುವ ಕನಸನ್ನು ಹೊಂದಿದ್ದರು. ಈ ಪ್ರಕಾರವಾಗಿ ಪ್ರಸ್ತುತ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಈಗ ಶಾಖಾ ಮಠವನ್ನು ಹೊಂದಲಾಗಿದೆ.
ಪರಮಪೂಜ್ಯ ಜಗದ್ಗುರುಗಳ ನೇತೃತ್ವದಲ್ಲಿ ಜಾತಿ, ಮತ, ಧರ್ಮವನ್ನು ಮೀರಿ ಶಿಕ್ಷಣ, ಅನ್ನ, ಆಶ್ರಯದ ದಾಸೋಹಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರಂತರವಾಗಿ ನಡೆಯುತ್ತಿವೆ. ಇದೀಗ ಪ್ರಬಲ ಮಠಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯದ ಶಾಖಾ ಮಠ ವಿದೇಶದಲ್ಲಿ ಹೊಂದುತ್ತಿರುವ ದೊಡ್ಡ ಸಾಧನೆಯಾಗಿದೆ. ಇಡೀ ಒಕ್ಕಲಿಗ ಸಮುದಾಯವೇ ಹೆಮ್ಮೆ ಪಡುವಂತಹ ಸಾಧನೆ ಇದಾಗಿದೆ.
ಸದ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಅಮೆರಿಕ ಶಾಖೆ ಹಾಗೂ ಅಮೆರಿಕನ್ ಲೀಡರ್ಶಿಪ್ ಕಮಿಟಿಯ ಆಹ್ವಾನದ ಮೇರೆಗೆ ಅಮೆರಿಕದ ಸಂಸತ್ ಭವನದಲ್ಲಿ ಆಯೋಜಿಸಲಾಗಿರುವ ಜಿ20 ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇವರೊಂದಿಗೆ ಮಂಗಳೂರು ಕಾವೂರು ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರೂ ಇದ್ದಾರೆ.