ನ್ಯೂಸ್ ನಾಟೌಟ್: ಭಾರತದಲ್ಲಿ ಹಸುಗಳನ್ನು ಕಾಮಧೇನು ಎಂದು ದೈವಿಕ ಸ್ವರೂಪವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಇಲ್ಲಿನ ಜನರು ಗೋವುಗಳನ್ನು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ ಜೊತೆಗೆ ಹಸು ಸಾಕುವ ಮನೆಯನ್ನು ಸಿರಿವಂತ ಮನೆ, ಭಾಗ್ಯಲಕ್ಷ್ಮೀ ನೆಲೆಸಿದ ಮನೆ ಎಂಬ ನಂಬಿಕೆಗಳೆಲ್ಲ ಇವೆ.
ಇಂತಹ ಹಸುವಿನಲ್ಲಿ ಪ್ರಪಂಚದಾದ್ಯಂತದ ವಿವಿಧ ತಳಿಯ ಹಸುಗಳು ಹಲವು ಬಗೆಯ ವಿಶೇಷತೆಯನ್ನು ಹೊಂದಿವೆ. ಹೆಚ್ಚು ಬೆಲೆ ಬಾಳುವ ಹಸುವೂ ಇದೆ. ಇದು ವಿಶ್ವದ ಅತ್ಯಂತ ದುಬಾರಿ ಹಸು ಎಂದು ಕರೆಯಲ್ಪಡುತ್ತದೆ.
ಬ್ರೆಜಿಲ್ನಲ್ಲಿರುವ ಹಸು ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಬಹು ಚರ್ಚೆಗೆ ಗ್ರಾಸವಾಗಿದೆ. ಈ ಹಸುವಿನ ಬೆಲೆಗೆ ನೀವು ಕಾರು, ಬಂಗಲೆ ಸಹ ಖರೀದಿಸಬಹುದು ಎನ್ನಲಾಗಿದೆ. ನೆಲ್ಲೂರು ತಳಿಯ ಈ ಹಸು ವಿಶ್ವದ ಅತಿ ದುಬಾರಿ ಬೆಲೆಯದ್ದಾಗಿದೆ.
ವಯಾಟಿನಾ-19 ಎಫ್ ಐವಿ ಮಾರಾ ಎಮೋವಿಸ್ ಎಂಬ ಹೆಸರಿನ ನೆಲ್ಲೂರು ತಳಿಯ ನಾಲ್ಕೂವರೆ ವರ್ಷದ ಈ ಹಸು ವಿಶ್ವದ ಅತ್ಯಂತ ದುಬಾರಿ ಹಸುವೆಂದು ಗುರುತಿಸಿಕೊಂಡಿದೆ.
ಈ ಜಾತಿಯ ನೂರಾರು ಹಸುಗಳು ಬ್ರೆಜಿಲ್ನಲ್ಲಿ ಕಂಡುಬರುತ್ತವೆ. ವರದಿಗಳ ಪ್ರಕಾರ, ಹಸುವಿನ ಮೂರನೇ ಒಂದು ಭಾಗದ ಮಾಲೀಕತ್ವವನ್ನು ಇತ್ತೀಚೆಗೆ ಬ್ರೆಜಿಲ್ನ ಅರಾಂಡೋದಲ್ಲಿ ಹರಾಜಿನಲ್ಲಿ 6.99 ಮಿಲಿಯನ್ ರಿಯಲ್ಗಳಿಗೆ ಅಂದರೆ ಸುಮಾರು 11 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಯಿತು. ಇದರ ವೆಚ್ಚ ಬಿಟ್ಟು ಒಟ್ಟು ಮೌಲ್ಯವನ್ನು $ 4.3 ಮಿಲಿಯನ್ (35 ಕೋಟಿ ರೂ.) ಇದೆ ಎನ್ನಲಾಗಿದೆ.
Viatina-19 FIV ಮಾರಾ ಇಮೋವಿಸ್ ಅನ್ನು ಕಳೆದ ವರ್ಷ ವಿಶ್ವದ ಅತ್ಯಂತ ದುಬಾರಿ ಹಸು ಎಂದು ಘೋಷಿಸಲಾಯಿತು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನು ಈ ತಳಿಗೆ ಇಡಲಾಗಿದೆ. ಇಲ್ಲಿಂದ ಬ್ರೆಜಿಲ್ಗೆ ತಳಿಯನ್ನು ಕಳುಹಿಸಲಾಯಿತು ಮತ್ತು ನಂತರ ಪ್ರಪಂಚದ ಇತರ ಭಾಗಗಳಿಗೆ ಸಹ ಹರಡಿತು ಎನ್ನಲಾಗಿದೆ.