ನ್ಯೂಸ್ ನಾಟೌಟ್: ಸಂಬಂಧಿಕರ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಆರ್ಆರ್ ನಗರ(RR Nagar)ದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಮನು ಎಂದು ಗುರುತಿಸಲಾಗಿದೆ.
ಈತ ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿ-ಪ್ರೇಮದ ಸಂಬಂಧಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಜುಲೈ 3 ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಮನೆಗೆ ಕರೆದೊಯ್ದಿದ್ದ. ಈ ವೇಳೆ ಯುವತಿಯ ಪೋಷಕರು ಮನು ಮನೆಗೆ ನುಗ್ಗಿ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದುದಿದ್ದರು.
ಇದಾದ ಬಳಿಕ ಮನು ಎಂದಿನಂತೆ ಕಾಲೇಜಿಗೆ ತೆರಳಿದ್ದು, ಆತನ ತಂದೆ ರಂಗನಾಥ ನಿನ್ನೆ (ಜು.15 ) ಬೆಳಗ್ಗೆ ಡ್ರಾಪ್ ಮಾಡಿದ್ದರು. ಬಳಿಕ ವಾಪಾಸ್ಸಾಗುವ ವೇಳೆ ಬಸ್ ನಿಲ್ದಾಣದಲ್ಲಿ ಬಸ್ಗೆ ಕಾಯುತ್ತಿದ್ದ ಮನುವನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಆತನ ಕೈ ಕಾಲು ಕಟ್ಟಿಹಾಕಿ ಬೆಂಕಿ ಹಚ್ಚಿದ್ದಾರೆ. ಗಾಯಾಳು ವಿದ್ಯಾರ್ಥಿ ಮನುಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.