ನ್ಯೂಸ್ ನಾಟೌಟ್ : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಲವ್ ಹೆಚ್ಚಾಗುತ್ತಿದೆ.ಪಬ್ಜಿ ಗೇಮ್ ಆಡುತ್ತಾ ಯುವಕನೊಂದಿಗೆ ಲವ್ ಆಗಿ ಪಾಕಿಸ್ತಾನದಿಂದ ಮಹಿಳೆಯೊಬ್ಬಳು ಭಾರತಕ್ಕೆ ಓಡಿ ಬಂದ ಘಟನೆ ಬೆನ್ನಲ್ಲೇ, ಭಾರತದ ಅಂಜು ಪಾಕಿಸ್ತಾನಕ್ಕೆ ಹೋದ ಪ್ರಕರಣ ಬೆಳಕಿಗೆ ಬಂದಿತ್ತು.ಇದೀಗ ರಾಜಸ್ಥಾನದ ಬಾಲಕಿಯೊಬ್ಬಳು ಪಾಕಿಸ್ತಾನದಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಲು (Love Story) ಪಾಕ್ಗೆ ತೆರಳಿದ ಘಟನೆಯೊಂದು ವರದಿಯಾಗಿದೆ.
ಹೌದು,ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಹುಡುಗನಿಗಾಗಿ ಜುಲೈ 28ರಂದು ಬಾಲಕಿಯು ಜೈಪುರ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಳೆ. ಪಾಸ್ಪೋರ್ಟ್, ವೀಸಾ ಸೇರಿ ಯಾವುದೇ ದಾಖಲೆ ಇಲ್ಲದೆ ಆಕೆ ಪಾಕಿಸ್ತಾನಕ್ಕೆ ಹೋಗುವ ವಿಮಾನ ಹತ್ತಲು ಪ್ರಯತ್ನಿಸಿದ್ದು, ಈ ವೇಳೆಗಾಗಲೇ ಸಿಕ್ಕಿ ಬಿದ್ದಿದ್ದಾಳೆ. ಆಕೆಯ ಬಳಿ ಯಾವುದೇ ದಾಖಲೆ ಇರದಿರುವುದನ್ನು ಕಂಡ ಅಧಿಕಾರಿಗಳು ಕೂಡಲೇ ಆಕೆಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ಪೋರ್ಟ್ ಸ್ಟೇಷನ್ ಆಫೀಸರ್ ದಿಗ್ಪಾಲ್ ಸಿಂಗ್ ” ಬಾಲಕಿ ಜತೆ ಯಾವುದೇ ದಾಖಲೆಗಳಿರಲಿಲ್ಲ.ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಾಲಕಿಯನ್ನು ಪರಿಶೀಲಿಸಿದಾಗ ಅಸಲಿ ವಿಷಯ ಗೊತ್ತಾಗಿದೆ. ಯಾವ ದಾಖಲೆಯೂ ಇಲ್ಲದೆ ಆಕೆ ಪಾಕಿಸ್ತಾನಕ್ಕೆ ಹೋಗಲು ಬಯಸುತ್ತಿದ್ದಳು. ಬಾಲಕಿಯು ಶ್ರೀಮಧೋಪುರದ ನಿವಾಸಿಯಾಗಿದ್ದು, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಗೆಳೆಯನನ್ನು ಭೇಟಿಯಾಗಲೆಂದು ಆಕೆ ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದಾಳೆ” ಎಂದು ಹೇಳಿದರು.
ಅದಲ್ಲದೇ ಜೈಪುರದಿಂದ ಪಾಕಿಸ್ತಾನಕ್ಕೆ ಯಾವುದೇ ವಿಮಾನ ಹಾರಾಟ ಇಲ್ಲ ಎಂದ ಅವರು ಸಿಬ್ಬಂದಿ ವರ್ಗ ಆಕೆಯ ದಾಖಲೆ ಪರಿಶೀಲಿಸಿದಾಗ ವಿಷಯ ಗೊತ್ತಾಗಿದೆ.ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದರು.ನಂತರ ಬಾಲಕಿಯನ್ನು ವಶಪಡಿಸಿಕೊಂಡಿರುವ ಕುರಿತು ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಬಳಿಕ ಆಕೆಯನ್ನು ಪೋಷಕರ ವಶಕ್ಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಅಲ್ವರ್ ಜಿಲ್ಲೆಯ ಅಂಜು ಎಂಬ ಎರಡು ಮಕ್ಕಳ ತಾಯಿ ಗಂಡನನ್ನು ಬಿಟ್ಟು ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಗೆಳೆಯ ನಸ್ರುಲ್ಲಾನನ್ನು ಮದುವೆಯಾಗಿರುವ ವಿಡಿಯೋ ವೈರಲಾಗಿತ್ತು.ಇದರ ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದ್ದು,ಆಘಾತಕಾರಿ ವಿಷಯವಾಗಿದೆ. ಫೇಸ್ ಬುಕ್ , ಇನ್ಸ್ಟಾಗ್ರಾಮ್, ಪಬ್ಜಿ ಅಂತೆಲ್ಲಾ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸಿ ಪ್ರೀತಿ ಮಾಡಿ ಅವರನ್ನು ಹುಡುಕಿಕೊಂಡು ಹೋಗುವ ಪ್ರಯತ್ನಗಳು ಆಗುತ್ತಿದ್ದು,ಹೆಣ್ಮಕ್ಕಳು ಯೋಚಿಸಬೇಕಾಗಿರುವ ವಿಚಾರ.ಪೋಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಒಳಿತು.