ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ನಾಪತ್ತೆಯಾಗಿರುವ ಯುವಕನೊಬ್ಬನಿಗಾಗಿ ಸುಳ್ಯದಲ್ಲಿ ಕುಟುಂಬಸ್ಥರು ಭಾರಿ ಹುಡುಕಾಟ ನಡೆಸುತ್ತಿದ್ದಾರೆ. ಸೋಮವಾರ (ಜು.10) ಪತ್ನಿಯ ಸೀಮಂತವಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಇಂತಹ ಸಮಯದಲ್ಲಿ ಪತಿ ನಾಪತ್ತೆಯಾಗಿರುವುದರಿಂದ ಪತ್ನಿ ಹಾಗೂ ಕುಟುಂಬಸ್ಥರು ಕಣ್ಣೀರಾಗಿದ್ದಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿರುವ ಕುಟುಂಬಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಾಪತ್ತೆಯಾದ ಯುವಕನ ಹೆಸರು ಪ್ರಶಾಂತ್. ಅವರಿಗೆ 45 ವರ್ಷ. ಇವರು ಮೂಲತಃ ಮಂಗಳೂರಿನವರು. ಅಲ್ಲಿನ ಬೈಕಂಪಾಡಿಯ ಗ್ಯಾಸ್ ಪ್ಲಾಂಟ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಎಂದಿನಂತೆ ಪ್ರಶಾಂತ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ ಅತ್ತ ಕೆಲಸಕ್ಕೂ ಹೋಗದೆ ಇತ್ತ ಮನೆಗೂ ವಾಪಸ್ ಬಾರದೆ ಕಾಣೆಯಾಗಿದ್ದಾರೆ ಎಂದು ಪ್ರಶಾಂತ್ ಪತ್ನಿ ಪೂರ್ಣಿಮಾ, ಪ್ರಶಾಂತ್ ಅವರ ತಂದೆ ಮಾಧವ ಅಮಿನ್ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ, ಪುತ್ತೂರಿನಲ್ಲಿ ಯುವಕನಿಗಾಗಿ ಈಗಾಗಲೇ ಹುಡುಕಾಟ ನಡೆಸಿದ್ದಾರೆ.
ಪ್ರಶಾಂತ್ ಮಂಗಳೂರಿನಿಂದ ಮಡಿಕೇರಿ ಬಸ್ ಹತ್ತಿದ್ದಾರೆ ಅನ್ನುವ ಮಾಹಿತಿ ಕೆಎಸ್ಆರ್ಟಿಸಿ ಕಂಡಕ್ಟರ್ ವೊಬ್ಬರಿಂದ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇದೀಗ ಸುಳ್ಯಕ್ಕೆ ಆಗಮಿಸಿ ಇಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಸುಳ್ಯದ ಖಾಸಗಿ ಲಾಡ್ಜ್ವೊಂದರಲ್ಲಿ ಈತ ತಂಗಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತಪಾಸಣೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಲಾಡ್ಜ್ನ ಎಂಟ್ರಿ ಬುಕ್ನಲ್ಲಿ ಪ್ರಶಾಂತ್ ಹೆಸರು ಇಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಕುಟುಂಬ ಮೂಲಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ಸಿಸಿಟಿವಿ ದೃಶ್ಯಾವಳಿಯನ್ನು ಪಡೆಯುವ ಸಾಧ್ಯತೆ ಇದೆ.
ಪೂರ್ಣಿಮಾ ತುಂಬು ಗರ್ಭಿಣಿಯಾಗಿದ್ದು ಸೋಮವಾರ ಅವರ ಸೀಮಂತ ಮಾಡುವುದಾಗಿ ನಿಶ್ಚಯಿಸಲಾಗಿತ್ತು. ಆದರೆ ಪತಿ ದಿಢೀರ್ ನಾಪತ್ತೆಯಾಗಿರುವುದರಿಂದ ಇದೀಗ ಪತ್ನಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಯುವಕ ನಾಪತ್ತೆಯಾಗಿರುವ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿರುವ ಮನೆಯವರು, ನಮಗೆ ಇಲ್ಲಿನ ಲಾಡ್ಜ್ ಸಿಬ್ಬಂದಿಯ ಸಹಾಯ ಬೇಕಿದೆ. ನಿನ್ನೆ ರಾತ್ರಿಯಿಂದ ನಾವು ಬಸ್ ಸ್ಟ್ಯಾಂಡ್ನಲ್ಲೇ ಉಳಿದುಕೊಂಡು ಸಿಸಿಟಿವಿ ದೃಶ್ಯಾವಳಿ ನೋಡುವುದಕ್ಕೆ ಕುಳಿತಿದ್ದೇವೆ. ಅವರು ಬದುಕಿದ್ದಾರೆ ಇಲ್ಲಿಗೆ ಬಂದಿದ್ದರು ಅನ್ನುವುದನ್ನು ಸ್ಪಷ್ಟಪಡಿಸುವುದು ಮಾತ್ರ ನಮ್ಮ ಉದ್ದೇಶ. ಲಾಡ್ಜ್ನವರಿಗೆ ನಾವು ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.