ನ್ಯೂಸ್ ನಾಟೌಟ್: ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಅವಾಚ್ಯ ಪದಗಳಿಂದ ಬೈದು, ಅವರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ಇಬ್ಬರ ವಿರುದ್ಧ ದೂರು ದಾಖಲಾಗಿದೆ. ತುಂಬೆ ನಿವಾಸಿಗಳಾದ ಮನೀಶ್ ಮತ್ತು ಮಂಜುನಾಥ್ ಆರೋಪಿಗಳು ಎಂದು ತಿಳಿದು ಬಂದಿದೆ. ‘ಪೊಲೀಸ್ ಹಾಗೂ ಅವರ ಜೊತೆಗಿದ್ದ ಮಹಿಳೆಯರು ಬೇರೆಬೇರೆ ಧರ್ಮಕ್ಕೆ ಸೇರಿದವರಾಗಿರಬಹುದು ಎಂದು ಭಾವಿಸಿ, ಆರೋಪಿಗಳು ವಿಚಾರಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಕುಮಾರ್ ಅವರು, ಪತ್ನಿ ಮತ್ತು ನಾದಿನಿ ಜತೆ ಬಿ.ಸಿ. ರೋಡ್ನಲ್ಲಿರುವ ವಸತಿ ಗೃಹಕ್ಕೆ ಹೋಗುತ್ತಿದ್ದರು. ಈ ವೇಳೆ ಇವರನ್ನು ಹಿಂಬಾಲಿಸಿಕೊಂಡು ಹೋದ ಆರೋಪಿಗಳು, ಕುಮಾರ್ ಅವರು ಪತ್ನಿ ಮತ್ತು ನಾದಿನಿಯನ್ನು ವಸತಿಗೃಹದಲ್ಲಿ ಬಿಟ್ಟು ವಾಪಸ್ ಬರುತ್ತಿದ್ದಾಗ ಅಡ್ಡಗಟ್ಟಿ, ‘ಯುವತಿಯರೊಂದಿಗೆ ನಿನಗೇನು ಕೆಲಸ’ ಎಂದು ಪ್ರಶ್ನಿಸಿದ್ದರು. ತಾವು ಪೊಲೀಸ್ ಎಂದು ಕುಮಾರ್ ಹೇಳಿಕೊಂಡರೂ, ‘ನೀನು ಪೊಲೀಸ್ ಅಲ್ಲ, ಅವಳು ನಿನ್ನ ಪತ್ನಿಯೂ ಅಲ್ಲ’ ಎಂದು ಹೇಳಿ ವಾಗ್ವಾದಕ್ಕೆ ಇಳಿದಿದ್ದರು. ಇದನ್ನು ಕಂಡು ಅಲ್ಲಿಗೆ ಬಂದ ಕುಮಾರ್ ಅವರ ಪತ್ನಿಯೊಂದಿಗೆ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಕಲಂ 341, 504, 354(ಡಿ), 354(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ‘ಆರೋಪಿಗಳು ನಮ್ಮ ಸಿಬ್ಬಂದಿಗೆ ಕಿರುಕುಳ ನೀಡಿದ ಸಂಬಂಧ ಪ್ರಕರಣ ದಾಖಲಾಗಿದೆ. ಅವರು ಯಾವುದಾದರೂ ಸಂಘಟನೆಗೆ ಸೇರಿದವರೇ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ.