ನ್ಯೂಸ್ ನಾಟೌಟ್: ಕಾರಿನಲ್ಲಿ ತೆರಳುತ್ತಿದ್ದ ನಗರಸಭೆಯ ಬಿಜೆಪಿ ಸದಸ್ಯ ಅಪ್ಪಣ್ಣ ಎಂಬವರನ್ನು ಯುವಕರ ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ಮೈತ್ರಿ ಸಭಾಂಗಣದ ಮುಂಭಾಗದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹಲ್ಲೆಯಿಂದ ಅಪ್ಪಣ್ಣ ಮುಖಕ್ಕೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೋಟೆಲ್ ಮಾಲೀಕ ಮೋನಿಶ್ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಘಟನೆಗೆ ಸಂಬಂಧಿಸಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರಿ ಮಳೆಯಿಂದಾಗಿ ಮಡಿಕೇರಿಯ ಮೋನಿಶ್ ಎಂಬವರಿಗೆ ಸೇರಿದ ಹೋಟೆಲ್ಗೆ ನೀರು ನುಗ್ಗಿತ್ತು. ಇದರಿಂದಾಗಿ ನಗರ ಸಭೆಯ ಸದಸ್ಯರು ಪರಿಶೀಲನೆಗೆ ತೆರಳಿದ್ದರು. ಈ ಸಂದರ್ಭ ಹೋಟೆಲ್ ಅನಧಿಕೃತವಾಗಿದೆ ಎಂದು ಅಪ್ಪಣ್ಣ ಹೇಳಿದ್ದರು. ಈ ಕಾರಣಕ್ಕೆ ಮೋನಿಶ್ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಆಧಾರದಲ್ಲಿ ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.