ನ್ಯೂಸ್ ನಾಟೌಟ್ : ಯುವಕನೋರ್ವ ಇಲಿ ಜ್ಚರಕ್ಕೆ ಬಲಿಯಾದ ಘಟನೆ ಮಡಿಕೇರಿಯಿಂದ ವರದಿಯಾಗಿದೆ.ಕರಿಕೆ ಸಮೀಪದ ಚೆಂಬೇರಿ ಆನೆಪಾರೆಯ ನಿವಾಸಿ ಲಿಬೀನ್ ಇಲಿ ಜ್ವರಕ್ಕೆ ಬಲಿಯಾದ ವ್ಯಕ್ತಿ.
ಕೂಲಿ ಕಾರ್ಮಿಕ ಬಾಲನ್ ಅವರ ಪುತ್ರ ಲಿಬೀನ್ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.ಈ ವೇಳೆ ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು.ಬಳಿಕ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು,ಇದೀಗ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ತಜ್ಞ ವೈದ್ಯರು ಹೇಳುವಂತೆ ಇದೊಂದು ರೀತಿಯ ಬ್ಯಾಕ್ಟೀರಿಯಾ ಸೋಂಕು.ಇಲಿ ಕಚ್ಚಿ ಮಾತ್ರ ಜ್ವರ ಬರಬೇಕು ಎಂದೇನಿಲ್ಲ.ಇಲಿಯ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.ಇದರ ಜೊತೆಗೆ ಇಲಿ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಬರುವಂತಹ ದ್ರವಗಳು ಕೂಡ ಹಾನಿಕಾರಕವಾಗಬಹುದು.
ಕೆಲವರಿಗೆ ಇಲಿಗಳು ಉಗುರುನಿಂದ ಪರಚಿ ಹೋದರೆ ಅಥವಾ ಹಲ್ಲಿನಿಂದ ಸಣ್ಣದಾಗಿ ಕಚ್ಚಿದರೆ ಕೂಡ ಜ್ವರ ಬರುವ ಸಾಧ್ಯತೆ ಇದೆಯೆಂದು ವೈದ್ಯರು ತಿಳಿಸಿದ್ದಾರೆ.