ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟ ಮತ್ತು ಬಳಕೆಯು ಹೆಚ್ಚಾಗಿದೆ ಅನ್ನುವಂತಹ ಆಘಾತಕಾರಿ ವರದಿ ಹೊರ ಬಿದ್ದಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಪೊಲೀಸರು ಇದೀಗ ಮಾದಕವಸ್ತು ಸೇವಿಸಿದವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮಾತ್ರವಲ್ಲ ಅವರ ಪತ್ತೆಗೆ ವಿಶೇಷ ಕಾರ್ಯಾಚರಣೆಯನ್ನೂ ಕೈಗೊಂಡಿದ್ದಾರೆ.
ಕೆಲ ದಿನಗಳಿಂದೀಚೆಗೆ ಹಲವಾರು ಮಂದಿ ಸಿಕ್ಕಿಬಿದ್ದಿದ್ದಾರೆ. ಗಾಂಜಾ ಪೂರೈಕೆದಾರರು ಯಾರು ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಎಲ್ಲ ಠಾಣೆಗಳಲ್ಲೂ ಪೂರೈಕೆದಾರರ ಪಟ್ಟಿಯನ್ನು ಸಿದ್ಧಪಡಿಸಿಡಲಾಗಿದೆ. ಇದೀಗ ಅಂತಹವರನ್ನು ಹುಡುಕಿ ಪ್ರಕರಣ ದಾಖಲಿಸುವುದಕ್ಕೆ ನಿರ್ಧರಿಸಲಾಗಿದೆ. ಇದೀಗ ಪೂರೈಕೆದಾರರಿಂದ ಗಾಂಜಾ ಸೇವಿಸಿ ಪಡೆದವರ ರಕ್ತ ಪರೀಕ್ಷೆಗಳನ್ನು ಮಾಡವುದಕ್ಕೂ ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರ ಈ ನಡೆಯು ಕೇವಲ ಗಾಂಜಾ ಪೂರೈಕೆದಾರರಿ ಮಾತ್ರವಲ್ಲ, ಗಾಂಜಾ ಸೇವನೆದಾರರೂ ನಡುಗುವಂತೆ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಗಾಂಜಾ ಪೂರೈಕೆ ಮಾಡುವ ಪೆಡ್ಲರ್ಗಳಷ್ಟೇ ನಮ್ಮ ಗುರಿ ಅಲ್ಲ. ಗಾಂಜಾ ಸೇವನೆ ಮಾಡುವವರೂ ನಮ್ಮ ಗುರಿಯಾಗಿದ್ದಾರೆ. ಇವರು ಬೇಡಿಕೆ ಇಡುವುದರಿಂದಲೇ ಹೊಸ ಹೊಸ ಗಾಂಜಾ ಪೂರೈಕೆದಾರರು ಈ ಮಾಫಿಯಾಗೆ ಬರುತ್ತಿದ್ದಾರೆ’ ಎಂದು ಹೇಳಿದರು.
ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಗಳು ಒಂದು ಕೆ.ಜಿ ಗಾಂಜಾ ತಂದು, ಅದನ್ನು ಇಲ್ಲಿ 5 ಗ್ರಾಂ. ಪ್ಯಾಕೇಟ್ ಮಾಡಿ, ಕನಿಷ್ಠ ಎಂದರೂ ₹50 ಸಾವಿರದಿಂದ ₹ 1 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದ ಅಂಶ ತನಿಖೆ ವೇಳೆ ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ, ಮಾದಕ ವಸ್ತು ಸೇವನೆಗೆ ಅವಕಾಶ ಮಾಡಿಕೊಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಆರಂಭಿಸಲಾಗಿದ್ದು ಭಾನುವಾರ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಒಟ್ಟಿಗೆ 25 ಮಂದಿಯನ್ನು ಬಂಧಿಸುವ ಮೂಲಕ ಮಾದಕವಸ್ತು ಮಾಫಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾರೆ.
ಮಡಿಕೇರಿಯಲ್ಲಿ ಬಂಧಿತರಾದವರ ಪೈಕಿ ಇಬ್ಬರಷ್ಟೇ ಮಾದಕವಸ್ತು ಪೂರೈದಾರರು ಎಂದು ಗೊತ್ತಾಗಿದೆ. ಇನ್ನುಳಿದವರೆಲ್ಲರೂ ಮಾದಕವಸ್ತು ಸೇವಿಸುತ್ತಿದ್ದವರು ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟವರು ಎಂದು ಹೇಳಲಾಗಿದೆ. ಈ ಬೃಹತ್ ಕಾರ್ಯಾಚರಣೆಯ ಮೂಲಕ ಪೊಲೀಸರು ಮಾದಕವಸ್ತು ಸೇವಿಸುವವರು ಮಾತ್ರವಲ್ಲ ಅದಕ್ಕೆ ಅವಕಾಶ ಮಾಡಿಕೊಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಅನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಹೋಂಸ್ಟೇನಲ್ಲಿ ಮಂಗಳೂರಿನಿಂದ ಬಂದಿದ್ದ 14 ಮಂದಿ ಗಾಂಜಾ ಸೇವಿಸುತ್ತಿದ್ದರು. ಇವರ ಬಳಿಯಿಂದ ಗಾಂಜಾ ಮಾತ್ರವಲ್ಲ 9 ಎಲ್ಎಸ್ಡಿ ಮಾತ್ರೆಗಳನ್ನೂ ವಶಪಡಿಸಿಕೊಂಡಿದ್ದಾರೆ. ಇವರಿಗೆ ಹೋಂಸ್ಟೇ ಕೊಡಿಸಿದ್ದ ಮಧ್ಯವರ್ತಿ ಹಾಗೂ ಹೋಂಸ್ಟೇ ನೀಡಿದ್ದ ಮಾಲೀಕ ಇಬ್ಬರನ್ನೂ ಬಂಧಿಸಲಾಗಿದೆ.