ನ್ಯೂಸ್ ನಾಟೌಟ್: ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದರೆ ಅತ್ತ ಕೊಡಗಿನಲ್ಲೂ ವರುಣ ರಾಯ ಅಬ್ಬರಿಸುತ್ತಿದ್ದಾನೆ. ಮಡಿಕೇರಿ, ಭಾಗಮಂಡಲ, ತಲಕಾವೇರಿಯಲ್ಲಿ ಭಾರಿ ಮಳೆಯಾಗುತ್ತಿದೆ.
ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬುಧವಾರ ಮಳೆ ಮುಂದುವರಿದಿದೆ. ಇದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲು ಏರಿಕೆಯಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಒಳ ಹರಿವು ಒಂದೂವರೆ ಸಾವಿರ ಕ್ಯುಸೆಕ್ ದಾಟಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಭಾರಿ ಏರಿಕೆಯಾಗುತ್ತಿದೆ. ಶ್ರೀಮಂಗಲದ ಸಮೀಪ ರಸ್ತೆಗೆ ಮರವೊಂದು ಉರುಳಿ ಬಿದ್ದಿದೆ. ಖಾಸಗಿ ಬಸ್ ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 19 ಸೆಂ.ಮೀನಷ್ಟು ಮಳೆಯಾಗಿದೆ ಎಂದು ವರದಿಯಾಗಿದೆ.