ನ್ಯೂಸ್ ನಾಟೌಟ್: ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಲಂಚವಾಗಿ ಸ್ವೀಕರಿಸಿದ್ದ 5,000 ರೂ. ಹಣವನ್ನು ಜಗಿದು ನುಂಗಿರುವ ಘಟನೆ ಮಧ್ಯಪ್ರದೇಶದಲ್ಲಿ ಜುಲೈ 24 ರಂದು ನಡೆದಿದೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿ ಗಜೇಂದ್ರ ಸಿಂಗ್ ಲಂಚದ ಹಣವನ್ನು ಜಗಿದು ನುಂಗಿರುವ ವ್ಯಕ್ತಿಯಾಗಿದ್ದು, ಭೂ ಪ್ರಕರಣದ ದೂರುದಾರರಾದ ಚಂದನ್ ಸಿಂಗ್ ಲೋಧಿ ಎಂಬವರಿಗೆ ಗಜೇಂದ್ರ ಸಿಂಗ್ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ, ಆ ಬಳಿಕ ಲೋಧಿ ಲೋಕಾಯುಕ್ತ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ ಪರಿಣಾಮ ಈ ಘಟನೆ ನಡೆದಿದೆ.
ಈ ಬಗ್ಗೆ ತನಿಖೆ ನಡೆಸಿದ ಜಬಲ್ಪುರದ ಲೋಕಾಯುಕ್ತ ಪೊಲೀಸರ ತಂಡ ಗಜೇಂದ್ರ ಸಿಂಗ್ ಖಾಸಗಿ ಕಚೇರಿಗೆ ತೆರಳಿ ಲಂಚವನ್ನು ಸ್ವೀಕರಿಸುತ್ತಲೇ ದಾಳಿ ನಡೆಸಿ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆದರೆ ಈ ವೇಳೆ ಗಜೇಂದ್ರ ಸಿಂಗ್ ತಾನು ಸ್ವೀಕರಿಸಿದ 5,000 ರೂ. ಮೊತ್ತದ ಲಂಚವನ್ನು ಜಗಿದು ನುಂಗಿದ್ದಾನೆ.
ತಕ್ಷಣವೇ ಗಜೇಂದ್ರ ಸಿಂಗ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಾಕಷ್ಟು ಪ್ರಯತ್ನಗಳ ನಂತರ ಲಂಚದ ನೋಟುಗಳನ್ನು ಬಾಯಿಯಿಂದ ತಿರುಳಿನ ರೂಪದಲ್ಲಿ ಹೊರತೆಗೆಯಲಾಗಿದೆ. ಸದ್ಯ ಗಜೇಂದ್ರ ಸಿಂಗ್ ಆರೋಗ್ಯ ಸ್ಥಿರವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.