ನ್ಯೂಸ್ ನಾಟೌಟ್: KSRTC ಬಸ್ಗಳ ನಡುವೆ ಚಾರ್ಮಾಡಿ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಎರಡೂ ಬಸ್ನ ಚಾಲಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಲ್ಲದೆ ಪ್ರಯಾಣಿಕರಿಗೂ ಕೂಡ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ದುರ್ಘಟನೆ ಸಂಭವಿಸಿದೆ. 2 ಬಸ್ಸುಗಳಲ್ಲಿ ಒಟ್ಟು 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಚಾರ್ಮಾಡಿ ಘಾಟಿಯಲ್ಲಿ ಸದ್ಯ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ರಸ್ತೆ ಕಾಮಗಾರಿಯನ್ನು ಮುಗಿಸಿ ಜನರಿಗೆ ಮುಕ್ತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ. 2019ರಲ್ಲಿ ಕುಸಿದ ರಸ್ತೆಗೆ ಕಾಮಗಾರಿ ಶುರುವಾಗಿದ್ದು ಇನ್ನೂ ಮುಗಿದಿಲ್ಲ. ಅಲ್ಲದೆ ಘಾಟಿಯಲ್ಲಿ ವಿಪರೀತ ಮಂಜು ಇದ್ದು ಇದು ಕೂಡ ಅಪಘಾತಕ್ಕೆ ಒಂದು ಕಾರಣವಾಗಿದೆ ಎಂದು ತಿಳಿದು ಬಂದಿದೆ. ಈ ಅಪಘಾತದ ಬಳಿಕ ಈಗ ರಸ್ತೆಯ ಎರಡೂ ಕಡೆಗಳಲ್ಲಿಯೂ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ನಡುವೆ ಕೆಲವು ಪ್ರಯಾಣಿಕರು 10 ಕಿ.ಮೀ. ನಡೆದುಕೊಂಡು ಕೊಟ್ಟಿಗೆಹಾರ ತಲುಪಿದ್ದಾರೆ ಎನ್ನಲಾಗಿದೆ.