ನ್ಯೂಸ್ ನಾಟೌಟ್: ತುಳುನಾಡಿನಲ್ಲಿ ಕೊರಗಜ್ಜನೇ ಸತ್ಯ ದೈವ. ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೈವ ಸ್ವರೂಪ. ಇಂತಹ ಕಾರ್ಣಿಕದ ದೈವದ ಮಹಿಮೆಯನ್ನು ಇಡೀ ಜಗತ್ತೇ ಇಂದು ಕೊಂಡಾಡುತ್ತಿದೆ. ಅಷ್ಟೇ ಏಕೆ ಹಲವಾರು ಭಕ್ತರು ಅಜ್ಜನ ಪವಾಡವನ್ನು ಕಣ್ಣಾರೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂತಹುದೇ ಒಂದು ಅಜ್ಜನ ಪವಾಡ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದಲ್ಲಿ ನಡೆದಿದೆ. ಹೌದು, ಇಲ್ಲಿನ ವ್ಯಕ್ತಿಯೊಬ್ಬರ ಕಾಣೆಯಾಗಿದ್ದ 30,000 ರೂ. ಮೌಲ್ಯದ ಚಿನ್ನದುಂಗುರ ಹರಕೆ ಹೊತ್ತ ಕೇವಲ 24 ಗಂಟೆಯೊಳಗೆ ವಾಪಸ್ ಸಿಕ್ಕಿದೆ. ಈ ಮೂಲಕ ಅಜ್ಜನ ಪವಾಡ ಹಾಗೂ ಶಕ್ತಿ ಕಲಿಯುಗದಲ್ಲಿ ಜೀವಂತವಾಗಿದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸಾಲೆತ್ತೂರು ಗ್ರಾಮದ ಕಿಶೋರ್ (35 ವರ್ಷ) ಅನ್ನುವವರು ಕೃಷಿಕ ಹಿನ್ನೆಲೆಯುಳ್ಳವರು. ಜುಲೈ 11 ರಂದು ತಮ್ಮ ತೋಟಕ್ಕೆ ಹೋಗಿ ಜೇನು ಕೃಷಿ ಕಾಯಕದಲ್ಲಿ ತೊಡಗಿದ್ದರು. ಮಳೆಗಾಲ ಆಗಿರೋದ್ರಿಂದ ಜೇನಿಗೆ ಸಕ್ಕರೆ ಪಾಕ ನೀಡುವುದಕ್ಕೆಂದು ತೋಟಕ್ಕೆ ಹೋಗಿದ್ದರು. ಕೆಲಸ ಮಾಡುವ ಗಡಿಬಿಡಿಯಲ್ಲಿ ಜೇನಿನ ಪೆಟ್ಟಿಗೆಯ ಅಡಿಮನೆಯನ್ನು ಶುಚಿಗೊಳಿಸುವುದಕ್ಕೆ ಪ್ರಯತ್ನಿಸಿದ್ದರು. ಈ ಸಂದರ್ಭ ಸ್ವಲ್ಪ ಮೋಡದ ವಾತಾವರಣವಿದ್ದುದರಿಂದ ಜೇನು ನೋಣಗಳು ಏಕಾಏಕಿ ಕಿಶೋರ್ ಮೇಲೆ ದಾಳಿ ಮಾಡಿವೆ. ಜೇನು ನೋಣಗಳು ಅವರ ಕೈಗೆ ಕಚ್ಚಿವೆ. ನೋವಿನಿಂದ ತಮ್ಮ ಕೈಯನ್ನು ರಭಸದಿಂದ ಹಿಂದಕ್ಕೆ ಎಳೆದುಕೊಳ್ಳುತ್ತಾರೆ. ಆಗ ಅವರ ಕೈನಲ್ಲಿದ್ದ ರೂ. 30,000 ಮೌಲ್ಯದ ಚಿನ್ನದುಂಗುರ ದೂರಕ್ಕೆ ಎಸೆಯಲ್ಪಡುತ್ತದೆ. ಈ ವಿಷಯ ಇವರ ಗಮನಕ್ಕೇ ಬಂದಿರುವುದಿಲ್ಲ. ನೋವಿನಿಂದ ಸುಧಾರಿಸಿಕೊಂಡು ಸಂಜೆಯ ವೇಳೆಗೆ ಅವರು ಮನೆಗೆ ತಲುಪಿದ್ದಾರೆ.
ಈ ವೇಳೆ ಕೈಯಲ್ಲಿದ್ದ ಉಂಗುರ ಎಸೆದು ಹೋಗಿರುವುದು ಗಮನಕ್ಕೆ ಬರುತ್ತದೆ. ತಕ್ಷಣ ಅವರು ಹಾಗೂ ಮನೆಯವರು ಸೇರಿ ಉಂಗುರ ಕಳೆದು ಹೋದ ತೋಟದ ಜಾಗಕ್ಕೆ ಬರುತ್ತಾರೆ. ಸುತ್ತಲು ತುಂಬಾ ಹುಲ್ಲು , ಕಸ ಕಡ್ಡಿಗಳು ಬೆಳೆದಿರುತ್ತೆ, ಅವರಿಗೆ ಎಷ್ಟೇ ಹುಡುಕಿದರೂ ಉಂಗುರವೇ ಸಿಗುವುದಿಲ್ಲ. ಕೊನೆಗೆ ರಾತ್ರಿಯೆಲ್ಲ ಉಂಗುರವನ್ನು ಹುಡುಕಿದರೂ ಸಿಗುವುದಿಲ್ಲ. ಕೊನೆಗೆ ಬೇಸರದಿಂದ ಎಲ್ಲರೂ ಮನೆಗೆ ವಾಪಸ್ ಮರಳುತ್ತಾರೆ. ಈ ವೇಳೆ ಕಿಶೋರ್ ಅವರು ಚಿನ್ನದ ಉಂಗುರ ಮರಳಿ ಸಿಕ್ಕಿದರೆ ಕೊರಗಜ್ಜನಿಗೆ ಅಗೇಲು ಸೇವೆ, ಪ್ರಿಯವಾದ ಮದ್ಯವನ್ನು ಕೊಡುವುದಾಗಿ ಹರಕೆ ಹೊತ್ತುಕೊಂಡರು. ಮರುದಿನ ಮತ್ತೆ ಬೆಳಗ್ಗೆ ಅದೇ ಜಾಗದಲ್ಲಿ ಬಂದು ಉಂಗುರದ ಹುಡುಕಾಟ ನಡೆಸುತ್ತಾರೆ. ಅಚ್ಚರಿ ಅಂದ್ರೆ ತೋಟದ ಕೆಲಸಕ್ಕೆ ಬಂದ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಆ ಉಂಗುರ ಸಿಗುತ್ತದೆ. ಇದರೊಂದಿಗೆ ಮನೆಯವರ ದೊಡ್ಡ ಟೆನ್ಷನ್ ಕಡಿಮೆ ಆಗಿ ನಿಟ್ಟುಸಿರು ಬಿಡುತ್ತಾರೆ. ಅಚ್ಚರಿ ಅಂದ್ರೆ ಮಳೆ ಸಾಕಷ್ಟು ಸುರಿದಿದ್ದರೂ ನೀರಿನಲ್ಲಿ ಉಂಗುರ ತೇಲಿಕೊಂಡು ಹೋಗದೆ ಅಲ್ಲೇ ಆವರಣ ಗೋಡೆಗೆ ತಾಗಿ ಹುಲ್ಲಿನ ಮಧ್ಯೆ ಒಂದು ಕಡೆ ನಿಂತಿತ್ತು.
ಸಾಲೆತ್ತೂರು ಗ್ರಾಮದಲ್ಲಿರುವ ಇವರ ಮನೆಯಂಗಳದಲ್ಲಿ ಕೊರಗಜ್ಜನ ಕಟ್ಟೆ ಇದೆ. ಬಹಳಷ್ಟು ವರ್ಷಗಳಿಂದಲೇ ಇಲ್ಲಿ ಕೊರಗಜ್ಜನ ಆರಾಧನೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಹಿಂದೊಮ್ಮೆ ಮನೆಯ ಹಟ್ಟಿಯಲ್ಲಿದ್ದ ದನಗಳು ಹಟ್ಟಿಗೆ ಬರದೆ ನಾಪತ್ತೆಯಾಗಿದ್ದವು. ಇದರಿಂದ ಕಂಗಾಲಾಗಿದ್ದ ಮನೆಯವರು ಕೊರಗಜ್ಜನಿಗೆ ಹರಕೆ ಹೊತ್ತಿದ್ದರು. ಕೆಲವೇ ನಿಮಿಷಗಳಲ್ಲಿ ದನಗಳು ಕಾಡಿನಿಂದ ಮನೆಗೆ ಬಂದು ಸೇರಿದ್ದು ಮನೆಯವರ ಅಚ್ಚರಿಗೆ ಕಾರಣವಾಗಿತ್ತು. ಕೊರಗಜ್ಜನಿಗೆ ಕೈ ಮುಗಿದು ಮನೆಯ ಅಂಗಳದಲ್ಲೇ ಒಂದು ಕಟ್ಟೆಯನ್ನು ನಿರ್ಮಿಸಲಾಯಿತು. ಈಗಲೂ ಮನೆಯ ಅಂಗಳದಲ್ಲಿ ಕೊರಗಜ್ಜನಿಗೆ ದೀಪ ಇಡಲಾಗುತ್ತದೆ. ಸದಾ ಆ ಮನೆಯನ್ನು ಕೊರಗಜ್ಜ ಕಾಪಾಡಿಕೊಂಡು ಬರುತ್ತಿದ್ದಾರೆ ಅನ್ನುವುದು ಮನೆಯವರ ನಂಬಿಕೆಯಾಗಿದೆ.