ನ್ಯೂಸ್ ನಾಟೌಟ್ : ಇತ್ತೀಚೆಗೆ ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿವೆ.ಮಾದಕ ವಸ್ತು ಮಾರಾಟ ಮತ್ತು ಸರಬರಾಜು ವಿರುದ್ಧ ಪೊಲೀಸರು ಸಮರ ಸಾರುತ್ತಲೇ ಇದ್ದಾರೆ. ಹೆಚ್ಚಾಗಿ ಯುವ ಜನತೆ ಮಾದಕ ದ್ರವ್ಯಗಳ ದಾಸರಾಗುತ್ತಿರುವುದು ಖೇದಕರ ಸಂಗತಿ. ಹೀಗಾಗಿ ತಮ್ಮ ಸಮುದಾಯದ ಯುವಕರು ಮಾದಕ ದ್ರವ್ಯದ ದಾಸರಾಗಬಾರದೆಂದು, ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ಕೊಡಗಿನ ಜಮಾತ್ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ.ಅದೇನೆಂಬುದಕ್ಕೆ ಇಲ್ಲಿದೆ ಮಾಹಿತಿ.
ಕೊಡಗಿನಾದ್ಯಂತ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕೊಡಗು ಪೊಲೀಸರು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕರನ್ನು ಬಂಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಲ ಯುವಕರು ಬಂಧನವಾಗಿರುವುದರ ಬಗ್ಗೆ ವರದಿಯೂ ಆಗಿತ್ತು.
ಹೀಗಾಗಿ ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಸಂಕ್ಷಿಪ್ತ, ಕಟ್ಟುನಿಟ್ಟಾದ ಸೂಚನೆಯನ್ನು ಕೊಂಡಂಗೇರಿ ಮಸೀದಿಯ(Kondangeri Mosque) ಹೊರಗೆ ಅಂಟಿಸಲಾಗಿದೆ.ಈ ಮೂಲಕ ಮಾದಕ ವಸ್ತುಗಳ ಸೇವನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುತ್ತಿದೆ.
ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾತ್ ವಿಶಿಷ್ಟ ಹೆಜ್ಜೆ ಇಟ್ಟಿದ್ದು,ಈ ಒಂದು ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಗ್ರಾಮದ ಮಸೀದಿ ಆವರಣದ ಹೊರಗೆ ಪೋಸ್ಟರ್ ಅಂಟಿಸಿ ಉತ್ತಮ ಹೆಜ್ಜೆ ಇರಿಸಿದೆ.ಡ್ರಗ್ಸ್ ಬಳಸುವ ಜನರನ್ನು ನಿಷೇಧಿಸುವುದರ ಜೊತೆಗೆ, ಸ್ಟೈಲ್ ಎಂದು ವಿಲಕ್ಷಣ ಕೇಶವಿನ್ಯಾಸವನ್ನು ಮಾಡಿಸಿಕೊಳ್ಳುವ ಯುವಕರನ್ನೂ ಜಮಾತ್ನಿಂದ ನಿಷೇಧಿಸಲಾಗಿದೆ.ಮಾತ್ರವಲ್ಲ ಹರಿದಂತಿರುವ ಬಟ್ಟೆಗಳನ್ನು ಧರಿಸುತ್ತಾ ಮಸೀದಿಗೆ ಪ್ರವೇಶಿಸುವುದನ್ನು ಜಮಾತ್ ನಿಷೇಧಿಸಿದೆ.
ಈ ಬಗ್ಗೆ ಜುಮ್ಮಾತ್ ಕಚೇರಿ ಕಾರ್ಯದರ್ಶಿ ಮಾತನಾಡುತ್ತಾ ಯುವಕರನ್ನು ಈ ವ್ಯಸನದಿಂದ ಮುಕ್ತ ಮಾಡಿಸುವುದೇ ಇದರ ಮೂಲ ಉದ್ದೇಶವೆಂದು ಹೇಳಿದ್ದಾರೆ.ಈ ಮೂಲಕ ಯುವಕರು ಒಳ್ಳೆಯ ದಾರಿ ಹಿಡಿಯುವಂತಾಗಲಿ ಎಂಬುದೇ ನಮ್ಮ ಆಶಯ.ಹೀಗಾಗಿ ಯಾವುದೇ ಯುವಕರು ಅಥವಾ ಇತರ ಯಾವುದೇ ನಿವಾಸಿಗಳು ಮಾದಕ ದ್ರವ್ಯ ಸೇವಿಸುತ್ತಿದ್ದಾರೆ ಎಂಬ ಬಗ್ಗೆ ನಮಗೆ ಶಂಕೆ ಕಂಡು ಬಂದಲ್ಲಿ ನಾವು ಮೊದಲು ಅವರನ್ನು ವಿಚಾರಿಸುತ್ತೇವೆ ಮತ್ತು ಅವರನ್ನು ಮಾದಕ ವ್ಯಸನ ಕೇಂದ್ರಕ್ಕೆ ಸೇರಿಸಬಹುದೇ ಎಂದು ನೋಡುತ್ತೇವೆ.ಈ ಮೂಲಕ ನಮ್ಮ ಪ್ರೊಸೆಸ್ ಆರಂಭಗೊಳ್ಳುತ್ತವೆ.
ಇದಾದ ಬಳಿಕ ಜಮಾತ್ನಿಂದ ಕೌನ್ಸೆಲಿಂಗ್ ಮಾಡಲಾಗುವುದು. ಅವರು ಇನ್ನೂ ಮಾದಕ ದ್ರವ್ಯ ಸೇವನೆಯನ್ನು ಮುಂದುವರಿಸಿದರೆ, ಅವರನ್ನು ಕೊಂಡಂಗೇರಿ ಮಸೀದಿಗೆ ಪ್ರವೇಶಿಸದಂತೆ ಬಹಿಷ್ಕರಿಸಲಾಗುವುದು ಮತ್ತು ಜಮಾತ್ನಿಂದ ಮದುವೆ ಸಮಾರಂಭದಲ್ಲಿ ನೀಡಲಾದ ಪ್ರಮಾಣಪತ್ರಗಳಲ್ಲಿ ನಾವು ಅದೇ ವಿಷಯವನ್ನು ನಮೂದಿಸುತ್ತೇವೆ ಎಂದು ಜಮ್ಮಾತ್ ಕಚೇರಿ ಕಾರ್ಯದರ್ಶಿ ರಫೀಕ್ ತಿಳಿಸಿದ್ದಾರೆ.
ಪ್ರತಿಯೊಬ್ಬ ನಿವಾಸಿಗೆ ಮದುವೆಯ ಸಮಯದಲ್ಲಿ ಈ ಪ್ರಮಾಣಪತ್ರದ ಅಗತ್ಯವಿದೆ. ಮಾದಕ ದ್ರವ್ಯ ಸೇವನೆಯ ವಿಷಯವನ್ನು ಪ್ರಮಾಣಪತ್ರದಲ್ಲಿ ನಮೂದಿಸಿದರೆ, ಇತರ ಎಲ್ಲ ಜಮಾತ್ಗಳಿಗೆ ಅದರ ಬಗ್ಗೆ ಎಚ್ಚರಿಕೆ ನೀಡಿದಂತಾಗುತ್ತದೆ. ಗ್ರಾಮದಲ್ಲಿ ಯಾವುದೇ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಕಂಡುಬಂದಲ್ಲಿ, ಜಮಾತ್ ಸದಸ್ಯರು ಪೊಲೀಸರೊಂದಿಗೆ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ರಫಿಕ್ ಹೇಳಿದ್ದಾರೆ. ಸಮುದಾಯದ ಯುವಕರನ್ನು ಮಾದಕ ವ್ಯಸನದಿಂದ ರಕ್ಷಿಸಲು ಇದೊಂದೇ ದಾರಿ ಎಂದು ಅಭಿಪ್ರಾಯ ಪಟ್ಟರು.