ನ್ಯೂಸ್ ನಾಟೌಟ್ : ಕಳೆದ ಕೆಲ ದಿನಗಳಿಂದ ಕೇರಳದಾದ್ಯಂತ ಭಾರಿ ಮಳೆಯಾಗುತ್ತಿದ್ದು,ಒಂದು ವಾರದ ಅಂತರದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ಶನಿವಾರ ಸಂಜೆಯವರೆಗೆ ದಕ್ಷಿಣ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಣಭೀಕರ ಮಳೆಗೆ ಕೇರಳದ ಹಲವೆಡೆ ಹಾನಿಯಾಗಿದೆ. ಇದೀಗ ಮಳೆ ಕಡಿಮೆಯಾದರೂ, ಎರ್ನಾಕುಲಂನ ಕನ್ನಮಲಿ ಮುಂತಾದ ಕಡೆಗಳಲ್ಲಿ ಸಮುದ್ರ ಮಟ್ಟ ಏರುತ್ತಿರುವ ಕಾರಂ ಕರಾವಳಿ ನಿವಾಸಿಗಳ ಜೀವನ ದುಸ್ತರವಾಗಿದೆ. ಇನ್ನು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಭಾರೀ ಮಳೆಯಿಂದಾಗಿ ಕೇರಳದಾದ್ಯಂತ 10,000 ಜನರು ನಿರಾಶ್ರಿತರಾಗಿದ್ದಾರೆ.ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾನುವಾರ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಜಲಾವೃತಗೊಂಡ ಸ್ಥಳಗಳಲ್ಲಿ ನೀರು ಇಳಿಮುಖವಾಗಿದ್ದರೂ, ಮಳೆಯಲ್ಲಿ ಮುಳುಗಿದ ಮನೆಗಳನ್ನು ಸ್ವಚ್ಛಗೊಳಿಸಲು ಹಲವು ಕುಟುಂಬಗಳು ಹರಸಾಹಸ ಪಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದುವರೆಗೆ 1,100 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ಹಾನಿಯ ಇತರ ವಿವರಗಳು ಇನ್ನೂ ಲಭ್ಯವಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಇನ್ನು “ಭಾರೀ ಮಳೆಯ ನಂತರ ರಾಜ್ಯಾದ್ಯಂತ ತೆರೆಯಲಾದ 227 ಪರಿಹಾರ ಶಿಬಿರಗಳಲ್ಲಿ 10,399 ಜನರು ಇದ್ದಾರೆ” ಎಂಬುದಾಗಿಯೂ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಅಧಿಕಾರಿ ತಿಳಿಸಿದ್ದಾರೆ.