ನ್ಯೂಸ್ ನಾಟೌಟ್ : ವೃದ್ಧರೊಬ್ಬರು ಟ್ರೈನ್ ಬರುತ್ತಿರುವ ಸಂದರ್ಭದಲ್ಲಿಯೇ ಹಳಿ ದಾಟಲು ಯತ್ನಿಸಿದ್ದು ಈ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ರೋಚಕ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆ ರೈಲು ನಿಲ್ದಾಣದಲ್ಲಿ ಇನ್ನೇನು ಟ್ರೈನ್ ಬರುತ್ತಿದ್ದ ಹಾಗೆ ವೃದ್ಧ ಆರಾಮವಾಗಿ ರೈಲ್ವೆ ಫ್ಲ್ಯಾಟ್ ಫಾರ್ಮ್ ನಿಂದ ಹಳಿಗೆ ಇಳಿದಿದ್ದಾರೆ.
ಅಲ್ಲಿಂದ ಮುಂದೆ ಹೋಗಲು ಯತ್ನಿಸುತ್ತಿರುವ ವೇಳೆಯಲ್ಲಾಗಲೇ ಹಾರ್ನ್ ಮಾಡುತ್ತಾ ಟ್ರೈನ್ ಬಂದೇ ಬಿಟ್ಟಿದೆ.ಇನ್ನೇನು ಆತ ರೈಲಿಗೆ ಸಿಕ್ಕಿಬಿಡುತ್ತಾನೆ ಅನ್ನುವಷ್ಟರಲ್ಲಿ ದೇವರಂತೆ ವ್ಯಕ್ತಿಯೊಬ್ಬ ಬಂದು ಕಾಪಾಡಿದ.ಪ್ಲಾಟ್ಫಾರಂನಲ್ಲಿ ನಿಂತಿದ್ದ ಆರ್ಪಿಎಫ್ ಕಾನ್ಸ್ಟೇಬಲ್ ಕೆಳಗೆ ಜಿಗಿದು ವೃದ್ಧನನ್ನು ಕಾಪಾಡಿದ ವ್ಯಕ್ತಿ. ಇವರು ಆ ಸ್ಥಳಕ್ಕೆ ಧಾವಿಸಿ ವೃದ್ದನನ್ನು ಹಳಿಯಿಂದ ಎಳೆದೊಯ್ದು ಕಾಪಾಡಿದ್ದಾರೆ.
ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.ಆದರೆ ಈ ವೃದ್ದ ಯಾಕೆ ಹೀಗೆ ಮಾಡಿದ್ರು ಅನ್ನುವ ಪ್ರಶ್ನೆ ಜನ ಸಾಮಾನ್ಯರಿಂದ ಕೇಳಿ ಬಂದಿದೆ. ಆದರೆ ಹಳಿ ದಾಟುತ್ತಿದ್ದ ವೃದ್ಧನನ್ನು ಗಮನಿಸಿದ ಗಸ್ತಿನಲ್ಲಿದ್ದ ಆರ್ಪಿಎಫ್ ಕಾನ್ಸ್ಟೇಬಲ್ ಶಿವಾನಂದ ಅವರು ಸೀದಾ ಹೋಗಿ ಕಾಪಾಡಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅವರ ಸಮಯಪ್ರಜ್ಞೆಯಿಂದ ವೃದ್ಧ ಉಳಿಯುವಂತಾಯಿತು ಎಂದು ವೈರಲ್ ಆದ ವಿಡಿಯೋಗಳಿಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಶಿವಾನಂದ ಅವರನ್ನು ಆರ್ಪಿಎಫ್ ಹಾಗೂ ರೈಲ್ವೆ ಪೊಲೀಸರು ಕೂಡ ಅಭಿನಂದಿಸಿದ್ದಾರೆ.
ಈ ಬಗ್ಗೆ ಅನೇಕರು ಕಾಮೆಂಟ್ ಮಾಡುತ್ತಾ ನಾನಾ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ರೈಲು ಬರುತ್ತಿರುವ ಸಮಯವನ್ನು ಗಮನಿಸದೆ ವೃದ್ದ ಇಳಿಯಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ, ಯಾವುದೇ ಮಾಹಿತಿಯನ್ನು ಪಡೆಯದೇ ಹಾಗೇ ರೈಲ್ವೆ ಹಳಿ ಮೇಲೆ ಇಳಿಯುವುದೇ ತಪ್ಪು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.ಆರ್ಪಿಎಫ್ ಕಾನ್ಸ್ಟೇಬಲ್ ಶಿವಾನಂದ ಅವರನ್ನು ತುಂಬಾ ಜನ ಹಾಡಿ ಹೊಗಳಿದ್ದಾರೆ.
ಈ ಎಲ್ಲ ದೃಶ್ಯಾವಳಿಗಳು ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬಾರಿ ವೈರಲ್ ಆಗಿವೆ. ಆದರೆ, ಈ ವಿಡಿಯೊದಲ್ಲಿ 2 ದಿನಾಂಕಗಳು ಕಂಡು ಬಂದಿವೆ.ಹಳೆ ವಿಡಿಯೋವೆ ಅಥವಾ ಹೊಸ ವಿಡಿಯೋವೆ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಒಂದು ಕಡೆ ಕೆಳಗಡೆ A24 DVG_CAM24 2023-07-07 ಎಂದು ನಮೂದಾಗಿದ್ದು, ಈ ಘಟನೆ ಜುಲೈ 7ರಂದು ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ರೈಲ್ವೇ ನಿಲ್ದಾಣಗಳಲ್ಲಿ ತುಸು ಎಚ್ಚರಿಕೆಯಿಂದ ಓಡಾಡುವುದು ಒಳಿತು.ರೈಲು ಆಗಮಿಸುವ ಸಮಯ ತಿಳಿದುಕೊಂಡು ಹಳಿ ದಾಟಬೇಕು.ಒಂದು ವೇಳೆ ವೃದ್ದನನ್ನು ಶಿವಾನಂದ ಅವರು ಕಾಪಾಡದೇ ಇದ್ದಿದ್ದರೆ , ಅವರು ಈ ವೃದ್ದನನ್ನು ಗಮನಿಸಿದೆ ಇದ್ದಿದ್ದರೆ ಪರಿಣಾಮ ಏನಾಗುತ್ತಿತ್ತು ಎನ್ನುವುದನ್ನು ಗಂಭೀರವಾಗಿ ಯೋಚಿಸಬೇಕಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ.