ನ್ಯೂಸ್ ನಾಟೌಟ್ : ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ಹಿರಿಯ ನಾಯಕ ಉಮ್ಮನ್ ಚಾಂಡಿ (79) ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಅವರನ್ನು ಕಳೆದ ಫೆಬ್ರವರಿ 12ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ “ನನಗೆ ಅತ್ಯಂತ ಆತ್ಮೀಯರಾಗಿದ್ದ ಉಮ್ಮನ್ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಉಮ್ಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅಪಾರ ಸಾಧನೆ ಮಾಡಿದವರಾಗಿದ್ದರು ಎಂದಿದ್ದಾರೆ.
2004 ರಿಂದ 2006 ಮತ್ತು 2011 ರಿಂದ 2016 ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಪಾಲರಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ಸಂವಿಧಾನದ ಆಶಯಗಳ, ಮೌಲ್ಯಗಳ ರಕ್ಷಣೆಗೆ ಶ್ರಮಿಸಿ ಹೋರಾಟ ರಾಜಕಾರಣದ ಪರಂಪರೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದರು.
1970 ರಿಂದ ಕೇರಳ ರಾಜ್ಯ ವಿಧಾನಸಭೆಗೆ ನಿರಂತರವಾಗಿ ಆಯ್ಕೆಯಾಗುತ್ತಾ ಅತ್ಯಂತ ದೀರ್ಘಾವಧಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದರು. ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಏಕೈಕ ಭಾರತೀಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನೂ ಗಳಿಸಿದ್ದರು.
ಅವರು ಮುಖ್ಯಮಂತ್ರಿ ಆಗಿದ್ದ ಮತ್ತು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ ಭೇಟಿಯಾಗಿದ್ದೆವು. ಅಭಿವೃದ್ಧಿ ವಿಚಾರದಲ್ಲಿ ಅವರದೇ ಆದ ಸ್ಪಷ್ಟ ತಿಳಿವಳಿಕೆ ಮತ್ತು ಮಾದರಿಗಳನ್ನು ಹೊಂದಿದ್ದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿ ಮಾಡಿದ್ದ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಅಪಾರವಾಗಿ ಶ್ಲಾಘಿಸಿದ್ದರು. ಬಡವರ ಮತ್ತು ಮಧ್ಯಮ ವರ್ಗದವರ ಬದುಕನ್ನು ಉನ್ನತೀಕರಿಸುವ ಸ್ಪಷ್ಟ ಗುರಿ ಮತ್ತು ಮಾರ್ಗ ನಾವು ಜಾರಿ ಮಾಡಿರುವ ಕಾರ್ಯಕ್ರಮಗಳಲ್ಲಿ, ನಾನು ಮಂಡಿಸಿದ ಆಯವ್ಯಯಗಳಲ್ಲಿ ಇದೆ ಎಂದು ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದರು.
ಅವರ ನಿಧನ ಅಭಿವೃದ್ಧಿ ಮತ್ತು ಜನಪರ ರಾಜಕಾರಣಕ್ಕೆ, ಕೇರಳ ರಾಜ್ಯಕ್ಕೆ, ಭಾರತೀಯ ರಾಜಕಾರಣಕ್ಕೆ ಹಾಗೂ ನನಗೆ ವೈಯುಕ್ತಿಕವಾಗಿ ತುಂಬಲಾರದ ನಷ್ಟ.ಮೌಲ್ಯಯುತ ರಾಜಕಾರಣದ ಹೆಜ್ಜೆಗುರುತನ್ನು ಉಳಿಸಿ ಹೋಗಿರುವ ಉಮ್ಮನ್ ಚಾಂಡಿಯವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಅಪಾರ ಬಂಧು ಮಿತ್ರರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.ಉಮ್ಮನ್ ಚಾಂಡಿ 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ನಲ್ಲಿ ಜನಿಸಿದ್ದು, ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್ಎಲ್ಬಿ ಪದವಿ ಪೂರೈಸಿದ್ದರು.
ಕೇರಳ ವಿದ್ಯಾರ್ಥಿ ಒಕ್ಕೂಟದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ 1967ರಲ್ಲಿ ಕೇರಳ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ್ದರು.ಕಾಂಗ್ರೆಸ್ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಉಮ್ಮನ್ ಚಾಂಡಿ 1969ರಲ್ಲಿ ಯುವ ಕಾಂಗ್ರೆಸ್ನ ರಾಜ್ಯಾಧ್ಯಕ್ಷರಾದ್ದರು.ಉಮ್ಮನ್ ಚಾಂಡಿ 2004ರಿಂದ 2006 ಹಾಗೂ 2011ರಿಂದ 2016ರ ವರೆಗೆ ಕೇರಳದ ಮುಖ್ಯಮಂತ್ರಿಯಾಗಿದ್ದರು. ಉಮ್ಮನ್ ಚಾಂಡಿ 1970ರಲ್ಲಿ ಪುತ್ತುಪಳ್ಳಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು.ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಸಾರ್ವಜನಿಕ ಸೇವೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಶ್ರಮಿಸಿದ್ದ ಉಮ್ಮನ್ ಚಾಂಡಿಗೆ 2013 ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.