ನ್ಯೂಸ್ ನಾಟೌಟ್: ತುಳುನಾಡಿನ ಒಂದೊಂದು ದೈವಗಳಿಗೂ ಅಪಾರ ಶಕ್ತಿ. ನಂಬಿಕೆಯೇ ಶಕ್ತಿಯಾಗಿರುವ ಈ ಮಣ್ಣಿನಲ್ಲಿ ಕಷ್ಟ ಬಂದಾಗಲೆಲ್ಲ ತಾವು ನಂಬುವ ದೈವ ಸನ್ನಿಧಿಗೆ ಅಡ್ಡ ಬಿದ್ದು ಕಷ್ಟಕಾರ್ಪಣ್ಯವನ್ನು ಹೇಳಿಕೊಳ್ಳುತ್ತಾರೆ. ಆ ದೈವವು ಭಕ್ತರ ಕಷ್ಟಗಳನ್ನು ದೂರ ಮಾಡಿ ಅಭಯ ನೀಡುತ್ತದೆ ಅನ್ನುವ ನಂಬಿಕೆ ಜನರದ್ದಾಗಿದೆ.
ಅಂತೆಯೇ ಇಲ್ಲೊಬ್ಬ ಭಕ್ತ ಬೈಕ್ ಕಾಣೆಯಾಗಿದೆ ಎಂದು ಹರಕೆ ಹೇಳಿಕೊಂಡ ಕೆಲವೇ ಕ್ಷಣಗಳಲ್ಲಿ ಬೈಕ್ ಸಮೇತ ಕಳ್ಳ ತನ್ನೆದುರಿಗೆ ಕಾಣಿಸಿಕೊಂಡು ಸಿಕ್ಕಿಬಿದ್ದ ಅಪರೂಪದ ಅಚ್ಚರಿಯ ವಿದ್ಯಮಾನವೊಂದು ಸುಳ್ಯದಲ್ಲಿ ನಡೆದಿದೆ. ಸದ್ಯ ಬೈಕ್ ಕದ್ದ ಕಳ್ಳ ಮೈಸೂರಿನ ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಉಬರಡ್ಕ ಮೂಲದ ವ್ಯಕ್ತಿಯೊಬ್ಬರು ಜು.25 ರಂದು ಸುಳ್ಯ ಸರಕಾರಿ ಬಸ್ ನಿಲ್ದಾಣದ ಸಮೀಪ ತಮ್ಮ ಬೈಕ್ ಅನ್ನು ಪಾರ್ಕ್ ಮಾಡಿರುತ್ತಾರೆ, ಜು. 26 ರಂದು ವಾಪಸ್ ಬಂದು ನೋಡಿದಾಗ ತಾವಿಟ್ಟ ಸ್ಥಳದಲ್ಲಿ ಬೈಕ್ ಇರುವುದಿಲ್ಲ. ವ್ಯಕ್ತಿಯೊಬ್ಬ ಬಂದು ತನ್ನ ಚಾಲಾಕಿತನದಿಂದ ಬೈಕ್ ಅನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಅನ್ನುವ ವಿಚಾರ ತಿಳಿಯುತ್ತದೆ. ಕಳ್ಳತನ ಆಗಿರುವುದು ಅವರ ಗಮನಕ್ಕೆ ಬರುತ್ತದೆ. ಇದರಿಂದ ಗಾಬರಿಗೊಳ್ಳುತ್ತಾರೆ. ಪೊಲೀಸ್ ದೂರನ್ನು ನೀಡುವುದಕ್ಕೂ ಮುಂದಾಗುತ್ತಾರೆ. ತನ್ನ ಕಷ್ಟವನ್ನು ದೈವದ ಮುಂದೆ ಹೇಳಿಕೊಳ್ಳುವುದಕ್ಕೆ ನಿರ್ಧರಿಸುತ್ತಾರೆ.
ಜು.28 (ನಿನ್ನೆ) ಗುರುವಾರ ಅವರು ಸುಳ್ಯದ ಗಾಂಧಿ ನಗರದಲ್ಲಿರುವ ಕಲ್ಕುಡ ದೈವದ ಸನ್ನಿಧಿಗೆ ಬರುತ್ತಾರೆ. ತನ್ನ ಬೈಕ್ ಕಳವಾಗಿದ್ದು ಆದಷ್ಟು ಬೇಗ ಅದನ್ನು ಹುಡುಕಿಕೊಡಬೇಕು ಎಂದು ದೈವದ ಎದುರು ನಿವೇದಿಸಿಕೊಳ್ಳುತ್ತಾರೆ. ಹೀಗೆ ಹರಕೆ ಹೊತ್ತು ಹಿಂತಿರುಗುವ ವೇಳೆ ಅಲ್ಲಿಯೇ ಮುಖ್ಯ ರಸ್ತೆಯಲ್ಲಿ ಇವರ ಕಣ್ಣೆದುರಿಗೆ ಬೈಕ್ ವೊಂದು ಸಂಪಾಜೆಯತ್ತ ಪಾಸಾಗುತ್ತದೆ. ಅಯ್ಯೋ..ಇದು ನನ್ನ ಬೈಕ್ ಅಲ್ವಾ ಎಂದು ಬೈಕ್ ಮಾಲೀಕರು ಕಣ್ಣರಳಿಸಿ ನೋಡುತ್ತಾರೆ. ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯದಿಂದ ಸಂಪಾಜೆ ಕಡೆಗೆ ಹೋಗುತ್ತಿರುವುದನ್ನು ನೋಡಿದ್ದಾರೆ.
ತಕ್ಷಣ ಅವರು ಕಲ್ಲುಗುಂಡಿಯಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಬೈಕ್ ಅನ್ನು ಫಾಲೋ ಮಾಡುತ್ತಾರೆ. ಬೈಕ್ ಅನ್ನು ಕಲ್ಲುಗುಂಡಿ ಬಳಿ ಅಡ್ಡ ಹಾಕಿ ಹಿಡಿಯಲಾಗುತ್ತದೆ. ಈ ವೇಳೆ ಆತ ಮೈಸೂರಿನ ವೈದ್ಯಕೀಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆತನ ಹೆಸರು ನಿರಂಜನ ಅನ್ನುವುದು ಕೂಡ ಗೊತ್ತಾಗಿದೆ.
ಬೈಕ್ ಕದ್ದ ವಿದ್ಯಾರ್ಥಿ ಸುಳ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಈ ಬೈಕ್ನಲ್ಲಿ ತಿರುಗಾಟ ನಡೆಸಿದ್ದಾನೆ ಅನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೋಜು ಮಸ್ತಿ ಮಾಡುವ ವಿದ್ಯಾರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೈಕ್ನಲ್ಲಿ ಮೈಸೂರಿನತ್ತ ಪ್ರಯಾಣ ಮಾಡುವುದಕ್ಕೂ ಮೊದಲು ಆತ ಬೈಕ್ ಕಳವಾಗಿರುವ ಬಗ್ಗೆ ಎಲ್ಲಾದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ? ಹುಡುಕಾಟ ನಡೆಸಲಾಗುತ್ತಿದೆಯೇ? ಅನ್ನುವ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಪಡೆದುಕೊಳ್ಳುತ್ತಾನೆ.
ಅಂತಹ ದೂರು ಯಾವುದು ದಾಖಲಾಗಿಲ್ಲ ಎಂದು ಖಚಿತಪಡಿಸಿಕೊಂಡ ನಂತರ ಆತ ಮೈಸೂರಿನತ್ತ ಪ್ರಯಾಣ ಮಾಡುವುದಕ್ಕೆ ಮುಂದಾಗಿದ್ದಾನೆ. ಅದೇ ವೇಳೆ ಕಲ್ಕುಡ ದೈವದ ಸನ್ನಿಧಿಯ ಎದುರೇ ಸಿಕ್ಕಿಬಿದ್ದಿರುವುದು ವಿಶೇಷವಾಗಿದೆ.